ಸಿದ್ದಾಪುರ: ತಾಲೂಕಿನಲ್ಲಿ ಅಕ್ರಮ ಸಾರಾಯಿಮಾರಾಟ ನಿಯಂತ್ರಿಸುವಂತೆ ತಾಲ್ಲೂಕಿನ ದೊಡ್ಮನೆ, ಕ್ಯಾದಗಿ, ಬಿಳಗಿ, ಇಟಗಿ, ಬೇಡ್ಕಣಿ ಗ್ರಾಮ ಪಂಚಾಯಿತಿಯ ಸಂಜೀವಿನಿ ಒಕ್ಕೂಟದ ಮಹಿಳೆಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಪಟ್ಟಣದ ನೆಹರೂ ಮೈದಾನದಿಂದ ತಹಶೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಕ್ರಮ ಸಾರಾಯಿ ಮಾರಾಟವನ್ನು ನಿಲ್ಲಿಸಬೇಕೆಂಬ ಮನವಿಯನ್ನು ತಹಶೀಲ್ದಾರ ಸಂತೋಷ ಕೆ.ಭಂಡಾರಿಯವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಾಧನಾ ಭಟ್ ಮಾತನಾಡಿ, ತಾಲ್ಲೂಕಿನಾದ್ಯಂತ ಅಕ್ರಮ ಸಾರಾಯಿ ಮಾರಾಟ ಹೆಚ್ಚಾಗಿದೆ. ಇದರಿಂದ ಜನರ ದುಡಿಮೆಯ ದುಡ್ಡು ಸಾರಾಯಿ ಮಾರಾಟಗಾರರ ಪಾಲಾಗುತ್ತಿದೆ. ಸಾರಾಯಿ ಮಾರಾಟಗಾರರು ಯಾರ ಭಯವೂ ಇಲ್ಲದೆ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ಸಾರಾಯಿ ಮಾರಾಟವನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಇನ್ನು ಹದಿನೈದು ದಿನದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಸಂಜೀವಿನಿ ಒಕ್ಕೂಟದ ಮಹಿಳೆಯರು ಪಟ್ಟಣದ ನೆಹರೂ ಮೈದಾನದಿಂದ ತಹಶೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅಕ್ರಮ ಸಾರಾಯಿ ಮಾರಾಟವನ್ನು ನಿಲ್ಲಿಸಬೇಕೆಂಬ ಮನವಿಯನ್ನು ತಹಶೀಲ್ದಾರ ಸಂತೋಷ ಕೆ.ಭಂಡಾರಿಯವರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಸಂತೋಷ ಭಂಡಾರಿ, ಸಂಬಂಧಿಸಿದ ಇಲಾಖೆಯವರಿಗೆ ಸೂಚಿಸಿ ಅಕ್ರಮಸಾರಾಯಿ ಮಾರಾಟವನ್ನು ತಡೆಯುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಅಕ್ರಮ ಸಾರಾಯಿ ಕುರಿತು ಈ ವರ್ಷ ಇಲ್ಲಿಯವರೆಗೆ 83 ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಸಾರಾಯಿ ಮಾರಾಟ ಮಾಡುವ ಬಗ್ಗೆ ನಮಗೆ ಮಾಹಿತಿ ನೀಡಿದರೆ, ನಿಮ್ಮ ಹೆಸರನ್ನು ಗೌಪ್ಯವಾಗಿಡುವುದಲ್ಲದೆ ಮಾರಾಟಗಾರರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಪಿಐ ಕುಮಾರ ಭರವಸೆ ನೀಡಿದರು.
ಕಳೆದ ಎರಡು ವರ್ಷದ ಅವಧಿಯಲ್ಲಿ ದೊಡ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರಾಯಿ ಕಾರಣದಿಂದ ಮೂರು ಕೊಲೆಗಳಾಗಿವೆ. ಸಾಕಷ್ಟು ಆತ್ಮಹತ್ಯೆಗಳೂ ಆಗಿದೆ. ಸಾರಾಯಿ ಮಾರಾಟಗಾರರು ಯಾರ ಭಯವೂ ಇಲ್ಲದೆ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸಾಧನಾ ಭಟ್ ಹೇಳಿದರು .