ಕಾರವಾರ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರು ಪರೇಶ್ ಮೇಸ್ತಾ ಪ್ರಕರಣದಲ್ಲಿ ತನಿಖೆ ನಡೆಸಿದ ಸಿಬಿಐ ಮೇಲೆ ಬಿಜೆಪಿ ಸರ್ಕಾರಕ್ಕೆ ವಿಶ್ವಾಸವಿಲ್ಲದಂತೆ ವರ್ತಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಹಾಗೂ ಕಾಂಗ್ರೆಸ್ ಮುಖಂಡೆ ಚೈತ್ರಾ ಕೊಠಾರಕರ್ ಆರೋಪಿಸಿದ್ದಾರೆ.
2017ರಲ್ಲಿ ನಡೆದಿದ್ದ ಪರೇಶ್ ಮೇಸ್ತಾ ಪ್ರಕರಣದ ತನಿಖೆಯನ್ನ ಅಂದಿನ ಕಾಂಗ್ರೆಸ್ ಸರ್ಕಾರ ಸಿಬಿಐಗೆ ವಹಿಸಿತ್ತು. ಸುಮಾರು ಐದು ವರ್ಷಗಳ ಕಾಲ ತನಿಖೆ ನಡೆಸಿದ ಸಿಬಿಐ ಬಿ ರಿಪೋರ್ಟ್ ಹಾಕಿದ್ದು, ಸಿಬಿಐ ಸಲ್ಲಿಸಿರುವ ವರದಿ ಸಹ ಬಹಿರಂಗವಾಗಿದೆ. ಹೀಗಿದ್ದರು ಬಿಜೆಪಿ ಕಳೆದ ಬಾರಿ ಚುನಾವಣೆಯಲ್ಲಿ ಪರೇಶ್ ಮೇಸ್ತಾ ಸಾವನ್ನ ಹಿಡಿದುಕೊಂಡು ಲಾಭ ಪಡೆದುಕೊಂಡಿರುವುದು ಸಾಕಾಗುವುದಿಲ್ಲ ಎನ್ನುವಂತೆ ಈ ಬಾರಿಯೂ ಇದೇ ವಿಚಾರವನ್ನ ಇಟ್ಟುಕೊಂಡು ಲಾಭ ಪಡೆಯಲು ಹೊರಟಿದೆ.
ಕೇಂದ್ರ ಹಾಗೂ ರಾಜ್ಯದಲ್ಲಿ ತನ್ನದೇ ಸರ್ಕಾರವಿದ್ದರು ಸಿಬಿಐ ಮಾಡಿರುವ ತನಿಖೆಯ ಮೇಲೆ ವಿಶ್ವಾಸ ಇಲ್ಲ ಎಂದು ಮರು ತನಿಖೆ ಮಾಡಿಸಲು ಹೊರಟಿದೆ. ಮರು ತನಿಖೆ ಎನ್ನುವ ಪದವನ್ನ ಇಟ್ಟುಕೊಂಡು ಜನರನ್ನ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಮರು ತನಿಖೆಯಲ್ಲೂ ಇದೇ ಅಂಶ ಬಿಟ್ಟು ಬೇರೆ ಏನು ಬರಲು ಸಾಧ್ಯವಿದೆ. ಕೇವಲ ಚುನಾವಣೆಗಾಗಿ ಬಿಜೆಪಿ ಸಾವಿನಲ್ಲೂ ರಾಜಕೀಯ ಮಾಡುತ್ತಿರುವುದು ಎಲ್ಲರಿಗೂ ತಿಳಿಯುತ್ತದೆ.
ಸಿಬಿಐನವರೇ ನಡೆಸಿದ ತನಿಖೆಯಲ್ಲಿ ಪರೇಶ್ ಮೇಸ್ತಾ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಕುಮಟಾಕ್ಕೆ ಭೇಟಿ ನೀಡಿದಾಗ ಅಲ್ಲಿಗೆ ತೆರಳಿದ್ದರು ಎನ್ನುವ ಅಂಶವನ್ನ ಉಲ್ಲೇಖಿಸಿದ್ದಾರೆ. ಪರೇಶ್ ಮೇಸ್ತಾ ಬಿಜೆಪಿ ಕಾರ್ಯಕರ್ತ ಆಗಿಲ್ಲದಿದ್ದರು ಆತನನ್ನ ತಮ್ಮ ಕಾರ್ಯಕರ್ತ ಇದ್ದ ಎಂದು ಜನರಲ್ಲಿ ಬಿಂಬಿಸುವ ಪ್ರಯತ್ನವನ್ನ ಬಿಜೆಪಿ ನಾಯಕರು ಮಾಡಿದ್ದರು. ಬಿಜೆಪಿಗರು ಅಧಿಕಾರಕ್ಕಾಗಿ ಮಾಡಿದ ಎಲ್ಲಾ ನಾಟಕಗಳು ಸಿಬಿಐ ನೀಡಿದ ವರದಿಯಿಂದ ಬಹಿರಂಗವಾಗಿದೆ.
ಶಾಂತಿಯುತ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನರಲ್ಲಿ ಕೋಮು ಭಾವನೆ ತರೆಸಿ, ಅಧಿಕಾರ ದಾಹಕ್ಕಾಗಿ ಬಿಜೆಪಿ ಗಲಭೆಯನ್ನ ಸೃಷ್ಟಿ ಮಾಡಿತು. ಇಂದಿಗೂ ಜನರು ನೆಮ್ಮದಿಯಿಂದ ಇರಬಾರದು ಎನ್ನುವ ಚಿಂತನೆ ಬಿಜೆಪಿ ನಾಯಕರಿಗೆ ಇರಬೇಕು ಅನಿಸುತ್ತದೆ. ಮೃತಪಟ್ಟ ಪರೇಶ್ ಮೇಸ್ತಾ ಕುಟುಂಬಕ್ಕೆ ಈ ಐದು ವರ್ಷ ಏನು ಸಹಾಯ ಮಾಡದ ಬಿಜೆಪಿ ನಾಯಕರು ಸಿಬಿಐ ವರದಿ ನೀಡಿದ ನಂತರ ತಮ್ಮ ರಾಜಕೀಯಕ್ಕೆ ಹಿನ್ನಡೆಯಾಗಬಹುದು ಎಂದು ಅರಿತು ಈಗ ಮರು ತನಿಖೆ ಎನ್ನುವ ನಾಟಕವನ್ನ ಮಾಡುತ್ತಿದ್ದಾರೆ. ಜಿಲ್ಲೆಯ ಜನರು ಈ ಬಾರಿ ಬಿಜೆಪಿಗರು ಮಾಡಿದ ನಾಟಕ ಏನೆಂದು ತಿಳಿದಿದ್ದು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಚೈತ್ರಾ ಕೊಠಾರಕರ್ ತಿಳಿಸಿದ್ದಾರೆ.