ಕುಮಟಾ: ತಾಲೂಕಿನ ಹೆಗಡೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ‘ಅರಳು ಮಲ್ಲಿಗೆ’ ಎಂಬ ವಿನೂತನ ಮಕ್ಕಳ ಸ್ನೇಹಿ ಅರಿವು ಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕಾನೂನು ಸೇವೆಗಳ ಪ್ರಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಶೇಷ ಮಕ್ಕಳ ಪೊಲೀಸ್ ಘಟಕ, ಉತ್ತರ ಕನ್ನಡ ಜಿಲ್ಲೆಯ ಸಹಯೋಗದಲ್ಲಿ ಸಂಘಟಿಸಲಾದ ‘ಅರಳು ಮಲ್ಲಿಗೆ’ ಎಂಬ ವಿನೂತನ ಮಕ್ಕಳ ಸ್ನೇಹಿ ಅರಿವು ಜಾಗೃತಿ ಕಾರ್ಯಕ್ರಮವನ್ನು ತಹಸೀಲ್ದಾರ್ ವಿವೇಕ ಶೇಣ್ವಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇದೊಂದು ಉತ್ತಮ ಕಾರ್ಯಕ್ರಮವಾಗಿದೆ. ಬಾಲನ್ಯಾಯ ಕಾಯಿದೆ ಹಾಗೂ ಇತರೇ ಕಾಯಿದೆಗಳ ಸಂಪೂರ್ಣ ವಿವರನ್ನೊಳಗಂಡ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವಾಗಿದೆ. ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು. ಮಕ್ಕಳಿಗೆ ತಪ್ಪು ಯಾವುದೆಂದು ತಿಳಿಯುವುದರ ಜೊತೆಗೆ ತಪ್ಪು ಆದಾಗ ಯಾವ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕೆಂಬುದು ಮಕ್ಕಳು ತಿಳಿದುಕೊಳ್ಳಬೇಕು.
‘ಅರಳು ಮಲ್ಲಿಗೆ’ ಎಂಬ ವಿನೂತನ ಶೀರ್ಷಿಕೆಯ ಕಾರ್ಯಕ್ರಮದ ಉದ್ದೇಶವೇನೆಂದರೆ, ಮಕ್ಕಳಿಗೆ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗಿರುವಂತಹ ಮಾಹಿತಿಯನ್ನು ನೀಡುವುದಲ್ಲದೆ, ಯಾವುದೇ ಅಪರಾಧ ಕೃತ್ಯಗಳಲ್ಲಿ ಬಾಗಿಯಾಗದೆ ತಮ್ಮ ಜೀವನದ ಗುರಿಯ ಕಡೆಗೆ ಗಮನ ಹರಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕು ರೂಪಿಸಿಕೊಳ್ಳಲು ನೆರವಾಗುವಂತಹ ಮಾಹಿತಿ ನೀಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ಮಾತನಾಡಿ, ಈ ಕಾರ್ಯಕ್ರಮದ ಹಿಂದೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಇದೆ. ಇಲಾಖಾ ಅಧಿಕಾರಿಗಳ ಶ್ರಮವಿದೆ ಎಂದ ಅವರು, ಈ ಕಾರ್ಯಕ್ರಮ ನಮ್ಮ ತಾಲೂಕಿನಲ್ಲಿ ಏರ್ಪಡಿಸಿದ್ದಕ್ಕೆ ಶ್ಲಾಘಿಸಿದರು. ಇದೊಂದು ಅದ್ಭುತ ಕಾರ್ಯಕ್ರಮ ಇದರ ಸದುಪಯೊವನ್ನು ಮಕ್ಕಳು ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ 2 ಗಂಘಟೆಯ ಅವಧಿಯಲ್ಲಿ ರಕ್ತ ಹಿನತೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ, ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಕಿರುಚಿತ್ರದ ಪ್ರದರ್ಶನ, ರಸ ಪ್ರಶ್ನೆ ಹಾಗೂ ಇಲಾಖಾ ಅಧಿಕಾರಿಗಳಿಂದ ಮಕ್ಕಳಿಗೆ ಮಾಹಿತಿ ಹಾಗೂ ಅರಿವು ನೀಡಲಾಯಿತು. ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾದ ಪಿಐ ತಿಮ್ಮಪ್ಪ ನಾಯ್ಕ, ಮೂರಾರ್ಜಿ ದೇಸಾಯಿ ವಸತಿ ನಿಲಯ ಮುಖ್ಯಸ್ಥ ರಾಜೀವ ಬಿ.ಗಾಂವಕರ, ರುದ್ರೇಶ ನೇತ್ರಾಣಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಮೇಲ್ವಿಚಾರಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ವಿಶೇಷ ಪೊಲೀಸ್ ಘಟಕ, ಪೊಲೀಸ್ ಇಲಾಖೆ, ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಉಪಸ್ಥಿತರಿದ್ದರು.
ನಂತರ ವಸತಿ ಶಾಲೆಯ ಮಕ್ಕಳಿಗೆ ಕಿರುಚಿತ್ರ, ಕ್ವೀಜ್ ಕಾರ್ಯಕ್ರಮದ ಮೂಲಕ ಮಕ್ಕಳ ಹಕ್ಕುಗಳ ಕುರಿತು ಅರವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಮಣ್ಣ ಕಾಡ್ರಕೊಪ್ಪ ಮತ್ತು ಹೇಮ ಭಂಡಾರಿ ನಿರೂಪಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತಸಮಾಲೋಚಕ ಸುನೀಲ್ ಗಾಂವಕರ ವಂದಿಸಿದರು.