ಕಾರವಾರ: ಎಂಡೋಸಲ್ಫಾನ್ ಪೀಡಿತರ ಸಮರ್ಪಕ ಸಮೀಕ್ಷೆ ನಡೆಸಿ ರೋಗಬಾಧೆಗೆ ಒಳಗಾದ ಎಲ್ಲರನ್ನು ಗುರುತಿಸಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಜಿಲ್ಲಾಮಟ್ಟದ ಸಮಗ್ರ ವಿಕಲಚೇತನರ ವಿಆರ್ಡಬ್ಲ್ಯೂ, ಯುಆರ್ಡಬ್ಲ್ಯೂ ಹಾಗೂ ಎಂಆರ್ಡಬ್ಲ್ಯೂ ನೌಕರರ ಒಕ್ಕೂಟ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಸರ್ಕಾರವು 2013-14 ನೇ ಸಾಲಿನಲ್ಲಿ ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸುವ ಕಾರ್ಯವನ್ನು ಆರಂಭಿಸಿತು. ಅದರಂತೆ ಜಿಲ್ಲೆಯ ಭಟ್ಕಳ, ಹೊನ್ನಾವರ, ಕುಮಟಾ ಅಂಕೋಲಾ, ಶಿರಸಿ ಮತ್ತು ಸಿದ್ದಾಪುರದ ತಾಲೂಕಾ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಡೋಸಲ್ಫಾನ್ ಶಿಬಿರವನ್ನು ನಡೆಸಿ ಫಲಾನುಭವಿಗಳನ್ನು ಗುರುತಿಸಿತ್ತು. ಆದರೆ ಅಂದು ನಡೆಸಿದ ಸಮೀಕ್ಷೆಯಲ್ಲಿ ಕೇವಲ ಶೇ. 4 ರಷ್ಟು ಮಾತ್ರ ಗುರುತಿಸಿ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಇನ್ನೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೊಳಗಾದ ಫಲಾನುಭವಿಗಳು ಶಿಬಿರದಿಂದ ಹೊರಗುಳಿದಿದ್ದಾರೆ. ವಿಷಯವೇ ತಿಳಿಯದೇ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆದರೆ ಪಕ್ಕದ ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನವರೆಗೂ ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಆದರೆ ನಮ್ಮಲ್ಲಿ ಒಮ್ಮೆ ಮಾತ್ರ ಸಮೀಕ್ಷೆ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಇನ್ನು ಉಡುಪಿ ಮತ್ತು ಮಂಗಳೂರಿನಲ್ಲಿ ಎಂಡೋಸಲ್ಫಾನ್ ಪೀಡಿತರಿಗೆ ಇರುವ ಸೌಲಭ್ಯಗಳು ಜಿಲ್ಲೆಯಲ್ಲಿನ ಪೀಡಿತರಿಗೆ ಇರುವ ಸೌಲಭ್ಯಗಳಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗುತ್ತಿದೆ. ಆ ಜಿಲ್ಲೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಎಂಡೋಸಲ್ಫಾನ್ ಪೀಡಿತರನ್ನು ಗುರುತಿಸುವಿಕೆ ಆಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಒಮ್ಮೆ ಮಾತ್ರ ಸಮೀಕ್ಷೆ ನಡೆಸಲಾಗಿದೆ. ಎಂಡೋಸಲ್ಫಾನ್ ಪುನರ್ವಸತಿ ಕೇಂದ್ರವಾಗಿ 5 ಎಕರೆ ಸ್ಥಳ ಮಂಜೂರಿಸಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಇದ್ಯಾವುದು ನಡೆದಿಲ್ಲ ಎಂದು ಆರೋಪಿಸಿದ್ದಾರೆ.
ಉಡುಪಿ, ಮಂಗಳೂರು ಭಾಗದಲ್ಲಿ ಶೇಕಡಾ 25ರಿಂದ 58 ಒಳಗಿರುವ ಎಂಡೋಸಲ್ಫಾನ್ ಫಲಾನುಭವಿಗಳಿಗೆ 31 ತಿಂಗಳು 2 ಸಾವಿರ ರೂಪಾಯಿ ಹಾಗೂ 59 ಮೇಲ್ಮಟ್ಟ ಫಲಾನುಭವಿಗಳಿಗೆ 4 ಸಾವಿರ ರೂ ನೀಡುತ್ತಿದ್ದಾರೆ. ಆದರೆ ನಮ್ಮಲ್ಲಿ 25 ರಿಂದ 60 ರವರೆಗಿನ ಎಂಡೋಸಲ್ಫಾನ್ ಫಲಾನುಭವಿಗಳಿಗೆ 2 ಸಾವಿರ ರೂ ಮಾತ್ರ ಹಾಗೂ 61 ಮೇಲ್ಪಟ್ಟ ಫಲಾನುಭವಿಗಳಿಗೆ 4 ಸಾವಿರ ರೂ ನೀಡಿ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು. ಎಂಡೋಸಲ್ಫಾನ್ ಪೀಡಿತರು ಮರಣ ಹೊಂದಿದವರಿಗೆ ಮರಣ ಪರಿಹಾರ ನೀಡುತ್ತಿದ್ದಾರೆ ಆದರೆ ನಮ್ಮಲ್ಲಿ ಯಾರಿಗೂ ಬಿಡಿಗಾಸು ನೀಡಿಲ್ಲ. ಇಂತಹ ತಾರತಮ್ಯದಿಂದಾಗಿ ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರು ತೊಂದರೆಗೊಳಗಾಗಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವ ಜೊತೆಗೆ ಈ ಮೊದಲಿನಂತೆ ಮನೆ ಬಾಗಿಲೆಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ನಾಗೇಶ ನಾಯ್ಕ ಭಟ್ಕಳ, ಗಣಪತಿ ಶೆಟ್ಟಿ, ಗಣೇಶ ಹೆಗಡೆ, ಉಮೇಶ ವಿ.ನಾಯ್ಕ, ಆನಂದು ಜಿ.ಪಡ್ತಿ, ಸಾಹಿನಾಥ್ ಎಸ್ ಪಡುವಳಕರ್, ಕೋಮಲ್ ಎಚ್ ಗೌಡ, ಪ್ರವೀಣಾ ನಾಯ್ಕ ಇದ್ದರು.