ಶಿರಸಿ: ಇಲ್ಲಿನ ಅರುಣೋದಯ ತರಬೇತಿ ಕೇಂದ್ರದಲ್ಲಿ ನಿರುದ್ಯೋಗಿ ಮಹಿಳೆಯರಿಗೆ 3 ತಿಂಗಳ ಉಚಿತ ಎಂಬ್ರಾಯ್ಡರಿ ತರಬೇತಿ ಕಾರ್ಯಕ್ರಮ ಉದ್ಘಾಟನೆ ಹಾಗೂ ಹಿಂದಿನ ತರಬೇತಿ ಬ್ಯಾಚ್‌ನ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಥಳೀಯ ನಗರಸಭಾ ಸದಸ್ಯ ರಾಘವೇಂದ್ರ ಶೆಟ್ಟಿ, ಇಂತಹ ಉಚಿತ ತರಬೇತಿಯ ಲಾಭ ಪಡೆದು ಸ್ವ ಉದ್ಯೋಗಿಗಳಾಗಿ ಸ್ವಾವಲಂಭಿ ಜೀವನ ನೆಡಸುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಕರಕುಶಲ ನಿಗಮದ ಮುಖ್ಯ ಕಾರ್ಯನಿರ್ವಾಹಕ ಸಿ.ಬಿ.ಮೈಕಲ್, ಈ ರೀತಿ ತರಬೇತಿ ಪಡೆದ ಶಿಬಿರಾರ್ಥಿಗಳು ನಮ್ಮಲ್ಲಿ ನೋಂದಣಿಯಾದಲ್ಲಿ ಅವರಿಗೆ ಸ್ವ ಉದ್ಯೋಗ ಮಾಡಲು ಮತ್ತು ತಾವು ತಯಾರಿಸಿದ ವಸ್ತುಗಳನ್ನು ಕರಕುಶಲ ಮೇಳಗಳಲ್ಲಿ ಪ್ರದರ್ಶನ ಮಾಡಿ ಮಾರಾಟ ಮಾಡಲು ಉಚಿತವಾಗಿ ವ್ಯವಸ್ಥೆ ಮಾಡಲಾಗುವುದಲ್ಲದೆ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡಲಾಗುವುದೆಂದು ತಿಳಿಸಿದರು.
ಅರುಣೋದಯದ ಟ್ರಸ್ಟಿ ವಿನಾಯಕ ಶೇಟ್ ಮಾತನಾಡಿ, ಕರಕುಶಲ ನಿಗಮ ಮತ್ತು ಅರುಣೋದಯ ಸಂಸ್ಥೆಯ ಆಶಯದಂತೆ ನೀವೆಲ್ಲರೂ ಸ್ವಾವಲಂಭಿಗಳಾಗಿ ಬದುಕು ಸಾಗಿಸುವಂತಾಗಲಿ ಎಂದರು.
ಪ್ರಾರಂಭದಲ್ಲಿ ಅರುಣೋದಯ ಸಂಸ್ಥೆಯ ಸಂಸ್ಥಾಪಕ ಸತೀಶ ನಾಯ್ಕ ಮಾತನಾಡಿ, ತರಬೇತಿಯ ಉದ್ದೇಶ ಮತ್ತು ತರಬೇತಿಯ ನಂತರ ಸಂಸ್ಥೆ ಹೇಗೆ ಶಿಬಿರಾರ್ಥಿಗಳಿಗೆ ಸ್ವಾವಲಂಭಿಗಳಾಗುವ ದಿಶೆಯಲ್ಲಿ ಮಾರ್ಗದರ್ಶನ ನೀಡುತ್ತದೆ ಎಂಬುದನ್ನು ವಿವರಿಸಿ ಹೇಳಿದರು.
ಸವಿತಾ ಮಂಡೂರು ಸ್ವಾಗತಿಸಿದರು, ಜ್ಯೋತಿ ಎಸ್.ನಾಯ್ಕ ವಂದಿಸಿದರು. ವೇದಿಕೆಯ ಮೇಲೆ ಕರಕುಶಲ ನಿಗಮದ ಹಸನ್ ಮತ್ತು ಅಂಜನಾ ಭಟ್ಟ ಉಪಸ್ಥಿತರಿದ್ದರು.