ಶಿರಸಿ: ಪಟ್ಟಣದಲ್ಲಿ ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಪಂಡಿತ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಈಗಾಗಲೇ ವಿಳಂಬವಾಗಿದ್ದು, ನಿಗದಿತ ಸಮಯದೊಳಗೆ ಮುಗಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಅವರು ಮಂಗಳವಾರ ಮಿನಿ ವಿಧಾನಸೌಧದಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ನಡೆಸಿದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಪಂಡಿತ ಸಾರ್ವಜನಿಕ ಆಸ್ಪತ್ರೆ 250 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಎರಿದೆ.ಆಸ್ಪತ್ರೆಗೆ ಜಾಗದ ಸಮಸ್ಯಯಿಂದಾಗಿ ನಗರಸಭೆಯಿಂದ ಪಕ್ಕದ ರಾಯಪ್ಪ ಹುಲೇಕಲ್ ಶಾಲೆಯ ಒಂದು ಎಕರೆ ಜಾಗವನ್ನು ನೀಡಿದ್ದಾರೆ. ಕಟ್ಟಡದ ಕಾಮಗಾರಿಯ ಕೆಲಸ ಈಗಾಗಲೇ ಶೇ 50ರಷ್ಟು ಮುಗಿಯಬೇಕಿತ್ತು. ಆದರೆ ಶೇ 20ರಷ್ಟು ಕಾಮಗಾರಿಯಾಗಿದ್ದರಿಂದ ಮುಂದಿನ ಕಾಮಗಾರಿ ವಿಳಂಬಮಾಡಬಾರದೆಂದು ಎಚ್ಚರಿಕೆ ನೀಡಿದರು.
ನಂತರ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ತೊಡಕಾಗಿದ್ದ ನಗರಕ್ಕೆ ನೀರು ಸರಬರಾಜಿನ ಪೈಪ್ ಲೈನ್ ಬೇರೆಡೆ ಸ್ಥಳಾಂತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಪೈಪ್ ಲೈನ್ ಸ್ಥಳಾಂತರಕ್ಕೆ 40 ಲಕ್ಷ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದ್ದು, ಈ ಪ್ರಕ್ರಿಯೆಗೆ ಟೆಂಡರ್ ನಡೆದು, ಕಾಮಗಾರಿ ಆರಂಭಗೊಳ್ಳುವದಕ್ಕೆ ಸಮಯ ಹಿಡಿಯಲಿದೆಯಲ್ಲದೇ ಅಲ್ಲಿಯವರೆಗೂ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗಲಿದೆ. ಹೀಗಾಗಿ, ನಗರಸಭೆ ಆಸ್ಪತ್ರೆಯವರಿಗೆ ಪೈಪ್ ಲೇನ್ ತೆರವುಗೊಳಿಸಲು ಅನುಮತಿ ಪತ್ರ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಅ.20ರಂದು ನಗರಸಭೆ ಸಾಮಾನ್ಯ ಸಭೆ ನಡೆಯಲಿದ್ದು, ಅಂದು ಚರ್ಚಿಸಿ ಅನುಮತಿ ಪತ್ರ ನೀಡುವುದಾಗಿ ಭರವಸೆ ನೀಡಿದರು. ಆಸ್ಪತ್ರೆ ಹಾಗೂ ಸಮೀಪದ ಚರ್ಚ್ ನಡುವೆ ವಿದ್ಯುತ್ ಮಾರ್ಗವಿದ್ದು, 12 ಲಕ್ಷ ರೂ. ವೆಚ್ಚದಲ್ಲಿ ಭೂಗತ ಕೇಬಲ್ ಅಳವಡಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ಆಡಳಿತಾಧಿಕಾರಿ ಡಾ.ಗಜಾನನ ಭಟ್, ಆಸ್ಪತ್ರೆಗೆ ಪ್ರತಿ ದಿನ 700 ಜನ ಹೊರ ರೋಗಿಗಳು ಆಗಮಿಸುತ್ತಿದ್ದು, 10-12 ಜನ ದಾಖಲಾಗುತ್ತಿದ್ದಾರೆ. ತಿಂಗಳಿಗೆ ಸರಾಸರಿ 250 ಹೆರಿಗೆ ನಡೆಯುತ್ತಿದೆ. ವೈದ್ಯರ ಹುದ್ದೆ 16 ರಷ್ಟಿದ್ದು, ಹಾಲಿ 12 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ರೇಡಿಯಾಲಾಜಿ, ಫಿಸಿಸಿಯಶನ್ ಕೊರತೆ ಇದೆ. ಶೇ 51 ಸ್ಟಾಫ್ ಕೊರತೆ ಇದೆ. ಆಫೀಸ್, ನರ್ಸಿಂಗ್, ಪ್ಯಾರಾ ಮೆಡಿಕಲ್ ಹುದ್ದೆಗಳು ಭರ್ತಿ ಆಗಬೇಕಿದೆ. ಡಯಾಲಿಸಿಸ್ ವಿಭಾಗದಲ್ಲಿ 27 ಜನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ವೇಟಿಂಗ್ ಲಿಸ್ಟ್ 6 ಜನ ಇದ್ದಾರೆ. ಇನ್ನೊಂದು ಮಿಷನ್ ಅಗತ್ಯವಿದೆ ಎಂದರು.
ರೋಗಿಗಳಿಗೆ ನೀಡುವ ಔಷಧಕ್ಕೆ ಕಳೆದ 2.5 ವರ್ಷದಿಂದ ಹಣ ಬಿಡುಗಡೆ ಆಗಿಲ್ಲ. ಔಷಧಕ್ಕಾಗಿ ಆರೋಗ್ಯ ರಕ್ಷಾ ಸಮಿತಿಯನ್ನೇ ಅವಲಂಬಿಸಬೇಕಿದೆ. ಪ್ರತಿ ತಿಂಗಳು 2 ಲಕ್ಷ ರೂ. ಕೊರತೆ ಆಗುತ್ತಿದೆ ಎಂದರು.
ಉಪವಿಭಾಗಾಧಿಕಾರಿ ದೇವರಾಜ ಆರ್., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ಟಿಎಚ್ಒ ಡಾ.ಗಜಾನನ ಭಟ್ಟ್, ತಾಲೂಕು ವೈದ್ಯಾಧಿಕಾರಿ ಡಾ.ವಿನಾಯಕ ಭಟ್ ಇತರರಿದ್ದರು.