ಕಾರವಾರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರು ಹಾಗೂ ಪುರುಷರಿಗೆ ಸಮಾನ ಕೆಲಸ ಮತ್ತು ಸಮಾನ ವೇತನ ನೀಡುತ್ತಿದ್ದು, ನರೇಗಾದಡಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳ ಹಾಗೂ ಲಿಂಗತ್ವ ಅಲ್ಪಸಂಖ್ಯಾತರನ್ನು ಯೋಜನೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನರೇಗಾ ಯೋಜನೆಯಡಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಸಲುವಾಗಿ 2021 ರಿಂದ ಮಹಿಳಾ ಕಾಯಕೋತ್ಸವವನ್ನು ಹಮ್ಮಿಕೊಂಡ ಪರಿಣಾಮ ನರೇಗಾದಡಿ ಕೆಲಸಕ್ಕೆ ಬರುವ ಮಹಿಳೆಯರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಅದ್ದರಿಂದ ಮಹಿಳಾ ಕಾಯಕೋತ್ಸವದ ಯಶಸ್ವಿ ಹಿನ್ನಲೆಯಲ್ಲಿ ಪ್ರಸಕ್ತ ವರ್ಷವೂ ಗ್ರಾಮೀಣ ಮಹಿಳೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತತರಿಗೆ ಹೆಚ್ಚಿನ ಪ್ರಮಾಣದಲ್ಲಿ ನರೇಗಾ ಯೋಜನೆಯಡಿಯ ಕಾಮಗಾರಿಗಳಲ್ಲಿ ಕೆಲಸ ನೀಡಿ ಸ್ವಾವಲಂಬಿ ಜೀವನ ನಡೆಸುವಂತೆ ಮಾಡಲು, ಯೋಜನೆಯ ಕುರಿತು ಮಾಹಿತಿ ನೀಡಲು ಹಲವು ಕ್ರಮ ಕೈಗೊಳ್ಳಲಾಗಿದೆ. ಇದರ ಭಾಗವಾಗಿ ಜಿಲ್ಲೆಯಾದ್ಯಂತ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಹಮ್ಮಿಕೊಳ್ಳಲು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಆದೇಶ ಹೊರಡಿಸಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಜನರು ಅಭಿಯಾನದಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ಪಡೆದುಕೊಳ್ಳುವ ಮೂಲಕ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಭಿಯಾನದ ಉದ್ದೇಶಗಳು: ನರೇಗಾದಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣವನ್ನು ಶೇ. 60ಕ್ಕೆ ಹೆಚ್ಚಿಸುವುದು. ಲಿಂಗತ್ವ ಅಲ್ಪಸಂಖ್ಯಾತರಿಗೆ ಜಾಬ್ ಕಾರ್ಡ್ ಮತ್ತು ಅಕುಶಲ ಕೆಲಸ ಒದಗಿಸುವುದು. ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ನರೇಗಾ ಯೋಜನೆಯ ವೈಯಕ್ತಿಕ ಸೌಲಭ್ಯಗಳನ್ನು ದೊರಕಿಸಿಕೊಟ್ಟು, ಆರ್ಥಿಕವಾಗಿ ಸಬಲೀಕರಣಗೊಳಿಸುವುದು. ಕಾಮಗಾರಿ ಸ್ಥಳಗಳನ್ನು ಮಹಿಳೆ ಹಾಗೂ ಮಕ್ಕಳ ಸ್ನೇಹಿಯನ್ನಾಗಿ ಮಾಡುವುದು. ಯೋಜನೆಯಡಿ ಸ್ವ-ಸಹಾಯ ಸಂಘಗಳ ಭಾಗವಹಿಸುವಿಕೆಗೆ ಉತ್ತೇಜಿಸುವುದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ ಪ್ರೇರೆಪಿಸಲು ಮಹಿಳಾ ಕಾಯಕ ಬಂಧುಗಳಿಗೆ ತರಬೇತಿ ನೀಡುವುದು. ಹಳ್ಳಿ ಸಂತೆಗಳಲ್ಲಿ ಸ್ವ-ಸಹಾಯ ಸಂಘಗಳ ಭಾಗವಹಿಸುವಿಕೆ ಉತ್ತೇಜಿಸುವುದು ಮತ್ತು ವಾರದ ಸಂತೆ ಹೊರತುಪಡಿಸಿ ಉಳಿದ ದಿನಗಳಲ್ಲಿ ಸ್ವ-ಸಹಾಯ ಗುಂಪುಗಳಿಗಾಗಿ ದಿನನಿತ್ಯ ಉಪಯೋಗಿಸುವ ವಸ್ತುಗಳ ಮಾರಾಟ ಮೇಳ ಆಯೋಜಿಸುವುದು.
ಸಿಇಒ, ಇಒಗಳಿಗೆ ಉಸ್ತುವಾರಿ: ಜಿಲ್ಲೆಯಾದ್ಯಂತ ತಿಂಗಳುಗಳ ಕಾಲ ಜರುಗುವ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನದ ಪರಿಣಾಮಕಾರಿ ಅನುಷ್ಠಾನದ ಉಸ್ತುವಾರಿಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ತಾಲೂಕ ಮಟ್ಟದಲ್ಲಿ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಹಿಸಲಾಗಿದೆ. ಹಾಗೇ ಗ್ರಾಮ ಪಂಚಾಯತಿ ಹಂತದಲ್ಲಿ ಅಭಿಯಾನ ಆಯೋಜನೆ ಹಾಗೂ ಮಹಿಳಾ ವಿಶೇಷ ಗ್ರಾಮ ಸಭೆ ನಡೆಸುವ ಜೊತೆಗೆ ಸೂಕ್ತ ಕ್ರಮವಹಿಸುವ ಜವಬ್ದಾರಿಯನ್ನು ಗ್ರಾಮ ಪಂಚಾಯತಿಗಳ ಅಧ್ಯಕ್ಷರಿಗೆ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಲಾಗಿದೆ.