• Slide
    Slide
    Slide
    previous arrow
    next arrow
  • ತ್ಯಾಜ್ಯ ವಿಲೇವಾರಿ ಘಟಕ ವಿರೋಧಿಸಿ ಪ್ರತಿಭಟನೆ

    300x250 AD

    ಕುಮಟಾ: ತಾಲೂಕಿನ ಹರನೀರ್ ಬಳಿ ಉದ್ದೇಶಿಸಲಾದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕವನ್ನು ವಿರೋಧಿಸಿ ಜೈ ಭೀಮ ಕ್ರಾಂತಿ ಯುವಸೇನಾ ಸಮಿತಿಯ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆ ನಡೆಸಿ, ಉಪವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ್ ಅವರಿಗೆ ಮನವಿ ಸಲ್ಲಿಸಿದರು.

    ಜೈ ಭೀಮ ಕ್ರಾಂತಿ ಯುವಸೇನಾ ಸಮಿತಿ ರಾಜ್ಯಾಧ್ಯಕ್ಷ ತಿಮ್ಮಪ್ಪ ರಾಮ ಮುಕ್ರಿ ಅವರ ನೇತ್ರತ್ವದಲ್ಲಿ ವಿವಿಧ ದಲಿತ ಸಂಘಟನೆಗಳು ಹಾಗೂ ಸುತ್ತಮುತ್ತಲಿ ಗ್ರಾಮಸ್ಥರು ಪಟ್ಟಣದ ಗಿಬ್ ಸರ್ಕಲ್‌ನಿಂದ ಸಹಾಯಕ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬಾರದೆಂದು ಘೋಷಣೆ ಕೂಗಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಮಳೆನಾಡು ಹಿಂದು ಮುಕ್ರಿ ಸಮಾಜದ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನೀರ್ನಳ್ಳಿ, ದೇವಗಿರಿ ಹಾಗೂ ವಾಲಗಳ್ಳಿ ಗ್ರಾಪಂ ವ್ಯಾಪ್ತಿಯ ಗಡಿ ಭಾಗದ ಹರನೀರ ಗ್ರಾಮ ಸರ್ವೆ ನಂಬರ್ 152, 153ರಲ್ಲಿ ಪುರಸಭೆಯವರು ತ್ಯಾಜ್ಯ ವಿಲೇವಾರಿ ಘಟಕ ಮಾಡುವ ಬಗ್ಗೆ ಸ್ಥಳ ಪರಿಶೀಲಿಸಿದ್ದು, ಈ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದರಿಂದ ಅಲ್ಲಿನ ಪರಿಸರ ಹಾಳಾಗುವ ಜೊತೆಗೆ ಸಮೀಪದಲ್ಲಿ ವಾಸವಾಗಿರುವ ಕುಟುಂಬಗಳಿಗೆ ತೀರಾ ತೊಂದರೆ ಉಂಟಾಗಲಿದೆ. ಪುರಸಭೆಯವರು ಹರನೀರಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸುವುದರಿಂದ ಗೋರೆ ಗೋಪಾಲಕೃಷ್ಣ ದೇವಸ್ಥಾನ, ಶಾಲಾ-ಕಾಲೇಜು, ಅಂಗನವಾಡಿ ಹಾಗೂ 25ಕ್ಕೂ ಅಧಿಕ ದಲಿತ ಕುಟುಂಬ ಸೇರಿದಂತೆ ಹರನೀರು, ತಲಗೋಡ, ಕುಂದಗೋಣಿ ಸುತ್ತಮುತ್ತಲಿನ ನೂರಾರು ಕುಟುಂಬದ ಜನರಿಗೆ ತೀರಾ ತೊಂದರೆ ಆಗಲಿದೆ. ಅಲ್ಲದೇ ಈ ಯೋಜನೆಯಿಂದ ಕುಡಿಯುವ ನೀರು, ಪರಿಸರ, ಜನಜೀವನ ಸಂಪೂರ್ಣವಾಗಿ ಮಾಲಿನ್ಯವಾಗಿ ಜನರು ಸಾಂಕ್ರಮಿಕ ರೋಗಗಳಿಗೆ ತುತ್ತಾಗುವದರಲ್ಲಿ ಸಂಶಯವಿಲ್ಲ. ಹಾಗಾಗಿ ಪುರಸಭೆಯವರು ಈ ಜಾಗವನ್ನು ಬಿಟ್ಟು ಬೇರೆ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ಗುರುತಿಸಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಇದೇ ಸ್ಥಳದಲ್ಲಿ ಪುರಸಭೆಯವರು ತ್ಯಾಜ್ಯ ವಿಲೇವಾರಿ ಘಟಕ ಮಾಡಲು ಮುಂದಾದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

    300x250 AD

    ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ರಾಘವೇಂದ್ರ, ತ್ಯಾಜ್ಯ ವಿಲೇವಾರಿ ಘಟಕ ಸುತ್ತಮುತ್ತಲಿನ ಸಾರ್ವಜನಿಕರಿಗೆ ತೊಂದರೆ ಉಂಟಾಗದAತೆ ವೈಜ್ಞಾನಿಕವಾಗಿ ಮಾಡಲಾಗುತ್ತದೆ. ಈ ಬಗ್ಗೆ ಸ್ಥಳ ಪರಿಶೀಲಿಸಿ, ಸ್ಥಳೀಯರ ಸಮ್ಮುಖದಲ್ಲಿ ಪುರಸಭೆ ಇಂಜಿನೀಯರ್, ಮುಖ್ಯಾಧಿಕಾರಿ, ತಹಶೀಲ್ದಾರ್ ಅವರೊಂದಿಗೆ ಚರ್ಚಿಸಿ ಯಾರಿಗೂ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಬಳಿಕ ಪ್ರತಿಭಟನಾಕಾರರು ತಹಶೀಲ್ದಾರ ವಿವೇಕ ಶೇಣ್ವಿ ಹಾಗೂ ದೇವಗಿರಿ ಗ್ರಾಪಂ ಕಚೇರಿಗೆ ಮನವಿ ಸಲ್ಲಿಸಿ, ಹರನೀರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸದಂತೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ದಲಿತ ಸಂಘದ ಕಾನೂನು ಸಲಹೆಗಾರ ಶಂಕರ ಹಳಕರ, ಸಂಘಟನೆಯ ಪ್ರಮುಖರಾದ ಸುಮನ್ ಹರಿಜನ, ನಾಗರಾಜ ಮುಕ್ರಿ, ಎನ್ ಆರ್ ಮುಕ್ರಿ, ಗೀರೀಶ ಎನ್ ಎಸ್, ಚಂದ್ರಕಾಂತ ಮುಕ್ರಿ, ರಾಜು ಮುಕ್ರಿ, ಇಂದಿರಾ ಮುಕ್ರಿ, ಮಂಜುಳಾ ಮುಕ್ರಿ, ಲೋಕೇಶ ಮುಕ್ರಿ, ಗ್ರಾಮಸ್ಥರಾದ ಸುರೇಶ ಹೆಗಡೆ, ಹನುಮಂತ ಪಟಗಾರ, ಮಹೇಶ ನಾಯ್ಕ, ಸುಭಾಸ ಶೇಟ್, ಗಣೇಶ ರಾಯ್ಕರ್ ಸೇರಿದಂತೆ ಹರನೀರು, ತಲಗೋಡ ಹಾಗೂ ಕುಂದಗೋಣಿಯ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top