ಅಂಕೋಲಾ: ರಾಜ್ಯ ಕೃಷಿ ಕಾಯ್ದೆಗಳು, ವಿದ್ಯುತ್ ತಿದ್ದುಪಡಿ ಮಸೂದೆ ರದ್ದುಪಡಿಸಲು ಹಾಗೂ ಅತಿವೃಷ್ಟಿ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರ ಮತ್ತು ಎಲ್ಲಾ ರೈತರ ಸಾಲಮನ್ನಾಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ 17ನೇ ರಾಜ್ಯ ಸಮ್ಮೇಳನದಲ್ಲಿ ಆಗ್ರಹಿಸಲಾಗಿದೆ.
ವರ್ಷಗಳ ಕಾಲ ನಡೆದ ಐತಿಹಾಸಿಕ ದೆಹಲಿ ರೈತ ಹೋರಾಟದ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ತನ್ನ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ್ದರೂ ಅದೇ ಸ್ವರೂಪದ ಕೃಷಿ ಕಾಯ್ದೆಗಳನ್ನು ರಾಜ್ಯ ಬಿಜೆಪಿ ಸರ್ಕಾರ ಉಳಿಸಿಕೊಂಡಿದೆ. ಈ ರೈತ ವಿರೋಧಿ ರಾಜ್ಯ ಕೃಷಿ ಕಾಯ್ದೆಗಳಾದ ಕರ್ನಾಟಕ ರಾಜ್ಯ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020, ಕರ್ನಾಟಕ ರಾಜ್ಯ ಎಪಿಎಂಸಿ ತಿದ್ದುಪಡಿ ಕಾಯ್ದೆ 2020 ಅನ್ನು ರದ್ದುಪಡಿಸಬೇಕು. ಪಂಪ್ ಸೆಟ್ಗಳಿಗೆ ಪ್ರೀಪೇಡ್ ಮೀಟರ್ ಅಳವಡಿಸುವ ವಿದ್ಯುತ್ ತಿದ್ದುಪಡಿ ಮಸೂದೆ 2022 ಅನ್ನು ಕೂಡಲೇ ಸಂಸತ್ತಿನಿಂದ ವಾಪಸ್ಸು ಪಡೆದು ರದ್ದುಪಡಿಸಬೇಕು, ಅತಿವೃಷ್ಟಿ ಸಂತ್ರಸ್ತ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ನಿರಂತರ ಕಡಿಮೆ ದರದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿರುವ ಕಾರಣದಿಂದಾಗಿ ಹಾಗೂ ಪ್ರಾಕೃತಿಕ ವಿಕೋಪಗಳಿಗೆ ಮೇಲಿಂದ ಮೇಲೆ ಸಿಲುಕಿ ನರಳುತ್ತಿರುವ ರೈತ ಸಮುದಾಯಕ್ಕೆ ಒಂದು ಬಾರಿ ಪರಿಹಾರ ಕ್ರಮವಾಗಿ ಎಲ್ಲಾ ಗ್ರಾಮೀಣ ಜನತೆಯ ಖಾಸಗಿ, ಸಾಂಸ್ಥಿಕ, ಲೇವಾದೇವಿ, ಮೈಕ್ರೋ ಫೈನಾನ್ಸ್ ಸಾಲಗಳು ಸೇರಿದಂತೆ ಎಲ್ಲಾ ರೀತಿಯ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಅ.14ರಿಂದ 16ರವರೆಗೆ ಮೂರು ದಿನಗಳ ಕಾಲ ರಾಯಚೂರಿನ ಹರ್ಷಿತ ಗಾರ್ಡನ್ನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ರಾಜ್ಯ ಸಮ್ಮೇಳನ ರೈತರ ಬದುಕು, ಕೃಷಿ ನೀತಿಗಳಿಗೆ ಸಂಬಂಧಿಸಿದ 25 ನಿರ್ಣಯಗಳನ್ನು ಅಂಗೀಕರಿಸಿದೆ.
ರೈತ ವಿರೋಧಿ ಕೃಷಿ ಕಾಯ್ದೆಗಳು, ವಿದ್ಯುತ್ ತಿದ್ದುಪಡಿ ಮಸೂದೆ ಹಾಗೂ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ವಿರೋಧಿಸಿ ನ.2ರಂದು ರಾಜ್ಯದಾದ್ಯಂತ ಎಲ್ಲಾ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಕೆಪಿಆರ್ಎಸ್ ರಾಜ್ಯ ಸಮಿತಿ ತಿಳಿಸಿದೆ.