ಅಂಕೋಲಾ: ತಾಲೂಕಿನ ವಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋಳೆ ಹೊಸಗದ್ದೆ ಗ್ರಾಮದಲ್ಲಿ ನರೇಗಾದಡಿ 3 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ರಸ್ತೆಯಂಚಿನ ಚರಂಡಿ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರೊಂದಿಗೆ ಶನಿವಾರ ರೋಜಗಾರ್ ದಿವಸ್ ಆಚರಿಸಲಾಯಿತು.
ಕಳೆದ 25 ದಿನಗಳಿಂದ ಪ್ರಗತಿಯಲ್ಲಿರುವ ಈ ಚರಂಡಿ ನಿರ್ಮಾಣ ಕಾಮಗಾರಿಯಲ್ಲಿ ಪ್ರತಿ ದಿನ 6 ಜನ ಮಹಿಳೆಯರು ಹಾಗೂ 11 ಜನ ಪುರುಷರು ಸೇರಿದಂತೆ ಒಟ್ಟು 17 ಜನ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ತಾಲೂಕಾ ಐಇಸಿ ಸಂಯೋಜಕರಾದ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ, ಕಾಮಗಾರಿ ಸ್ಥಳದಲ್ಲಿದ್ದ ಕೂಲಿಕಾರರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸಿಗಬಹುದಾದ ಸೌಲಭ್ಯ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಕುರಿತು ವಿವರಿಸಿದರು. ಜೊತೆಗೆ ನರೇಗಾ ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಆಯುಕ್ತಾಲಯದಿಂದ ಹೆಚ್ಚಿದಲಾದ ನರೇಗಾದಡಿಯ ಕಾಮಗಾರಿಗಳ ಧನ ಸಹಾಯದ ಕುರಿತು ಮಾಹಿತಿ ನೀಡಿದರು. ಹಾಗೇನೆ ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಗ್ರಾಮ ಪಂಚಾಯಿತಿಯಿಂದ ಕಡ್ಡಾಯವಾಗಿ ಉದ್ಯೋಗ ಚೀಟಿ ಪಡೆಯಬೇಕು. ಆ ಮೂಲಕ ಉದ್ಯೋಗ ಹಾಗೂ ವೈಯಕ್ತಿಕ ಕಾಮಗಾರಿ ಪಡೆದುಕೊಳ್ಳಲು ಗ್ರಾಮ ಪಂಚಾಯತಿಗೆ ಫಾರ್ಮ್ ಸಂಖ್ಯೆ 6 ರಲ್ಲಿ ಅರ್ಜಿ ಸಲ್ಲಿಸಬೇಕು. ತದನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಉದ್ಯೋಗ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 100 ದಿನ ಕೂಲಿ ಕೆಲಸ ಕೊಡಲು ಹಾಗೂ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗೆ ಸಿಗಬೇಕಾದ ವೈಯಕ್ತಿಕ ಕಾಮಗಾರಿ ಒದಗಿಸಲು ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಂದಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪುಷ್ಪಲತಾ ಆರ್. ನಾಯ್ಕ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಗಿರೀಶ್ ನಾಯಕ, ತಾಂತ್ರಿಕ ಸಹಾಯಕ ಇಂಜಿನಿಯರ್ ವಸಂತ ಹೆಗಡೆ, ಗ್ರಾಪಂ ಸಿಬ್ಬಂದಿ ಶ್ರೀಧರ್ ನಾಯ್ಕ ಸೇರಿದಂತೆ ಕೂಲಿಕಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.