ದಾಂಡೇಲಿ: ನಗರದ ಸಾರಿಗೆ ಘಟಕದಿಂದ ದಾಂಡೇಲಿ-ಹಳಿಯಾಳ-ಧಾರವಾಡಕ್ಕೆ ತಡೆ ರಹಿತ ಸಾರಿಗೆ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಚಾಲಕ ಕಂ ನಿರ್ವಾಹಕ ಹೀಗೆ ಒಬ್ಬನೇ ಬಸ್ ಚಾಲನೆ ಮಾಡುವುದಲ್ಲದೇ, ಪ್ರಯಾಣಿಕರ ಟಿಕೇಟನ್ನು ಪಡೆದುಕೊಳ್ಳಬೇಕು. ಬಿ.ಎಂ.ಟಿ.ಸಿ ಘಟಕದಲ್ಲಿ ಇರುವಂತಹ ಈ ನಿಯಮವನ್ನು ಗ್ರಾಮೀಣ ಭಾಗಗಳಲ್ಲಿ ಸಂಚಾರಿಸಬೇಕಾದ ಇಲ್ಲಿಯ ಸಾರಿಗೆ ಘಟಕದ ಬಸ್ಸುಗಳಿಗೆ ಜಾರಿ ಮಾಡದೇ, ಇಲ್ಲಿಯ ತಡೆ ರಹಿತ ಸಾರಿಗೆ ಬಸ್ಸುಗಳಿಗೆ ಚಾಲಕರ ಜೊತೆ ನಿರ್ವಾಹಕರನ್ನು ನಿಯೋಜಿಸಬೇಕೆಂದು ನಗರದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷ ವಿಷ್ಣು ನಾಯರ್ ಮನವಿ ಮಾಡಿದ್ದಾರೆ.
ಕಳೆದೆರಡು ತಿಂಗಳುಗಳಿಂದ ದಾಂಡೇಲಿ ಘಟಕದಿಂದ ತಡೆ ರಹಿತ ಸೇವೆಗೆ ಎರಡು ಬಸ್ಸುಗಳನ್ನು ನಿಯೋಜಿಸಲಾಗಿದೆ. ಇಲ್ಲಿನ ಬಸ್ ನಿಲ್ದಾಣದಲ್ಲಿ ಟಿಕೇಟ್ ಪಡೆದು ಮುಂದೆ ಸಂಚರಿಸುವ ಬಸ್ ಆನಂತರ ಕೆ.ಸಿ.ವೃತ್ತ, ಮೂರು ನಂ ಗೇಟ್ ಮತ್ತು ಹಾಲಮಡ್ಡಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು, ಹಾಲಮಡ್ಡಿಯಲ್ಲಿ ಬಸ್ಸನ್ನು ನಿಲ್ಲಿಸಿ, ಚಾಲಕ ಇನ್ನೂಳಿದ ಪ್ರಯಾಣಿಕರ ಟಿಕೇಟ್ ಪೆದುಕೊಳ್ಳುತ್ತಾರೆ. ಇಲ್ಲಿ ಕೆಲ ಹೊತ್ತು ವ್ಯರ್ಥವಾಗುತ್ತದೆ. ಇನ್ನೂ ಮೊದಲೆ ದಾಂಡೇಲಿಯಿಂದ ಧಾರವಾಡದವರೆಗೆ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಿದ್ದು, ತೀವ್ರ ಹದಗೆಟ್ಟಿದೆ. ಚಾಲಕನೆ ನಿರ್ವಾಹಕನ ಕೆಲಸ ಮಾಡಬೇಕಾಗಿರುವುದರಿಂದ ಒತ್ತಡದಲ್ಲೆ ಚಾಲನೆ ಮಾಡಬೇಕಾಗುತ್ತದೆ. ಹೀಗಿರುವಾಗ ಇಲ್ಲಿ ಚಾಲಕ ಮತ್ತು ಪ್ರಯಾಣಿಕರಿಗೆ ಅಪಾಯವಾಗುವ ಸಾಧ್ಯತೆಯಿದೆ. ಬಿ.ಎಂ.ಟಿ.ಸಿ ಘಟಕದ ಬಸ್ಸುಗಳಿಗೆ ಅನ್ವಯವಾಗುವಂತಹ ನಿಯಮಗಳನ್ನು ಗ್ರಾಮೀಣ ಭಾಗದ ಇಲ್ಲಿಗೆ ಅನ್ವಯಮಾಡುವುದು ಅಪಾಯವನ್ನು ಅಹ್ವಾನಿಸುವಂತೆ ಆಗಲಿದೆ. ತಡೆ ರಹಿತ ಸೇವೆ ಎಂದು ಹೇಳಿ ನಗರ ಪ್ರದೇಶ ದಾಟಿ ಟಿಕೇಟ್ ಪಡೆಯಲು ನಿಲ್ಲಿಸುವುದು ಸ್ಪಷ್ಟವಾದ ಉದ್ದೇಶಕ್ಕೆ ವಿರುದ್ದವಾಗಿದೆ. ಪ್ರಯಾಣಿಕರ ಮತ್ತು ಚಾಲಕರ ಸುರಕ್ಷತೆಯ ದೃಷ್ಟಿಯಿಂದ ಈ ಬಸ್ಸುಗಳಿಗೂ ನಿರ್ವಾಹಕರನ್ನು ನಿಯೋಜಿಸುವಂತೆ ಸಾರಿಗೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.