ಹಳಿಯಾಳ: ಅ.13ರಂದು ನಿಗದಿಯಾಗಿರುವ ರಾಜ್ಯ ಸರ್ಕಾರದ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರ ಸಭೆಯನ್ನು ಹಳಿಯಾಳದಲ್ಲಿ ರೈತರ ಸಮ್ಮುಖದಲ್ಲಿಯೇ ನಡೆಸುವಂತಾಗಬೇಕು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಲಿಖಿತ ಪತ್ರದ ಮೂಲಕ ಆಗ್ರಹಿಸಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೋಬಾಟಿ ಆಗ್ರಹಿಸಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅ.13ರಂದು ಬೆಳೆಗಾರರ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರ ಸಮ್ಮುಖ ಚರ್ಚೆ ನಡೆಸಿ ಪರಿಹರಿಸಲು ನಿರ್ಧರಿಸಿ ಪ್ರಕಟಿಸಿದ್ದಾರೆ. ಆದರೆ ಧಾರವಾಡ, ಕಾರವಾರ ಅಥವಾ ಇನ್ನೆಲ್ಲೋ ಸಭೆಯನ್ನು ನಿಗದಿಪಡಿಸಬಾರದು. ಒಂದಾನುವೇಳೆ ಹಳಿಯಾಳ ಹೊರತುಪಡಿಸಿ ಬೇರೆಡೆ ಸಭೆ ನಡೆಸಲು ಆಹ್ವಾನಿಸಿದರೆ ರೈತರು ಆ ಸಭೆಯನ್ನು ಬಹಿಷ್ಕರಿಸಲಿದ್ದಾರೆ ಮತ್ತು ನಾವು ಯಾರು ಕೂಡ ಆ ಸಭೆಗೆ ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿರಿಯ ಮುಖಂಡ ಎನ್.ಎಸ್.ಜಿವೋಜಿ ಮಾತನಾಡಿ, ಸೋಮವಾರದ ಸಭೆಗೂ ಕಾರ್ಖಾನೆಯವರು ಸರಿಯಾದ ಸಂಪೂರ್ಣ ಮಾಹಿತಿ ತರದೇ ತಪ್ಪು ಮಾಹಿತಿ ನೀಡುತ್ತಿದ್ದರು. ಇದು ಅ.13ರ ಮಹತ್ವಪೂರ್ಣ ಸಭೆಯಲ್ಲಿ ಪುನರಾವರ್ತನೆ ಆಗದೆ, ಪ್ಯಾರಿ ಕಾರ್ಖಾನೆಯವರು ಕಾರ್ಖಾನೆ ಆರಂಭವಾದಾಗಿನಿಂದ ನೀಡಿರುವ ದರ ಹಾಗೂ ಇತರ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ, ದಾಖಲಾತಿಗಳೊಂದಿಗೆ ಸಭೆಗೆ ಬರಬೇಕೆಂದು ಆಗ್ರಹಿಸಿದ್ದಾರೆ
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಅಧ್ಯಕ್ಷ ಬಸವರಾಜ ಬೇಂಡಿಗೇರಿಮಠ ಇದ್ದರು.