ಕಾರವಾರ: ಜಿಲ್ಲೆಯಲ್ಲಿ ಈಗಾಗಲೇ ಆಯುಷ್ಮಾನ್ ಕಾರ್ಡ್ಗಳನ್ನು ನೀಡಲಾಗುತ್ತಿದ್ದು, ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯಲ್ಲಿನ ಎಲ್ಲ ಜನಸಾಮಾನ್ಯರಿಗೂ ಆಯುಷ್ಮಾನ್ ಕಾರ್ಡ್ ವಿತರಣೆಯಾಗುವಂತೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಸಭಾಭವನದಲ್ಲಿ ಮಂಗಳವಾರದಂದು ಆರೋಗ್ಯ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೇ ಒಟ್ಟು 2 ಲಕ್ಷದ 75 ಸಾವಿರ ಜನರು ಆಯುಷ್ಮಾನ ಯೋಜನೆಯಡಿಯಲ್ಲಿ ಪ್ರಯೋಜನ ಪಡೆದುಕೊಂಡಿದ್ದು, ಜನಸಾಮಾನ್ಯರು ಸ್ವಯಂ ಪ್ರೇರಣೆಯಿಂದ ಆಯುಷ್ಮಾನ್ ಕಾರ್ಡಗಳನ್ನು ತುರ್ತು ಸಂದರ್ಭದಲ್ಲಿ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿನ ಎಲ್ಲ ತಾಲೂಕಾ ಆಸ್ಪತ್ರೆಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಹಾಗೂ ಜಿಲ್ಲೆಯಲ್ಲಿ ಶೇಕಡಾ 30ರಿಂದ 40 ಪ್ರತಿಶತದಷ್ಟು ಸಿ ಸೆಕ್ಷನ್ ಹೆರಿಗೆಯಾಗುವುದನ್ನು ಕಡಿಮೆ ಮಾಡಬೇಕು ಎಂದು ಅಧಿಕಾರಿಗಳಿಗೆ ಎಂದು ಸೂಚಿಸಿದರು. ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ, ಸಂಸ್ಥೆಯಲ್ಲಿ ಮೂರು ಹಂತದ ಚಿಕಿತ್ಸೆಗಳನ್ನು ನೀಡಲಾಗುತ್ತಿದ್ದು, ತೃತಿಯ ಹಂತದ ಸೇವೆಯನ್ನು ಉತ್ಕೃಷ್ಟವಾಗಿ ನೀಡಲು ಬೇಕಾಗುವಂತಹ ಉಪಕರಣಗಳನ್ನು ಸ್ಥಳದಲ್ಲಿಯೇ ಮಂಜೂರು ಮಾಡಲಾಗಿದೆ ಎಂದು ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಜಿಲ್ಲೆಗೆ ತುರ್ತು ಸೇವಾ ಕೇಂದ್ರವನ್ನು ಮಂಜೂರು ಮಾಡಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು. ನಂತರ ಕುಮಟಾ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ಸ್ಥಳ ಪರಿಶೀಲನೆ ನಡೆಸಿ, ಸ್ಥಳ ನಿಗದಿಯಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರು ನೀಡಿ ಕಾಮಗಾರಿ ಪ್ರಾರಂಭಿಸಲಾಗುವುದು. ಸರ್ಕಾರದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ಕೃಷ್ಟವಾದ ಆರೋಗ್ಯ ಸೇವೆಯನ್ನು ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಂ, ಭಾರತೀಯ ಆಡಳಿತ ಸೇವೆ, ಅಧಿಕಾರಿ ಡಿ. ರಂದೀಪ, ಕುಮಟಾ ವಿಧಾನ ಸಭೆ ಶಾಸಕ ದಿನಕರ ಶೆಟ್ಟಿ, ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.