ಕುಮಟಾ: ಪಟ್ಟಣದ ಚಿತ್ರಗಿಯ ವಿಷ್ಣುತೀರ್ಥದಲ್ಲಿ ತಾಲೂಕು ಮಟ್ಟದ ಈಜು ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ತಾಲೂಕಿನ ಗುಡೇಅಂಗಡಿಯ ದಿ.ಪಾರ್ವತಿ ಹಾಗೂ ದಿ.ಮಹಾದೇವ ನಾಯ್ಕ ಸ್ಮರಣಾರ್ಥ ಅವರ ಪುತ್ರ ಸಾಮಾಜಿಕ ಕಾರ್ಯಕರ್ತ ಬಾಬು ನಾಯ್ಕ ಅವರು ಚಿತ್ರಗಿಯ ವಿಷ್ಣುತೀರ್ಥದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಈಜು ಸ್ಪರ್ಧೆಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಮತ್ತು ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಸಂಚಾಲಕ ಎಸ್.ಎಸ್.ಭಟ್ ಲೋಕೇಶ್ವರ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಈಜಿನಿಂದ ಆರೋಗ್ಯ ವೃದ್ಧಿಯಾಗುವ ಮೂಲಕ ಮನಸ್ಸಿಗೆ ಸಮಾಧಾನ ದೊರೆಯುತ್ತದೆ ಎಂದರು.
ಜಿಲ್ಲಾ ಪಂಚಾಯತಿ ನಿಕಟಪೂರ್ವ ಸದಸ್ಯ ರತ್ನಾಕರ ನಾಯ್ಕ ಮಾತನಾಡಿ, ನಮ್ಮ ಕುಮಟಾಕ್ಕೆ ಒಂದು ಒಳ್ಳೆಯ ಈಜುಕೊಳ ಬೇಕು. ಅಲ್ಲಿ ಎಲ್ಲ ವ್ಯವಸ್ಥೆ ಇರಬೇಕು. ಸ್ವಚ್ಛತೆಯನ್ನು ಕಾಪಾಡಿ, ವರ್ಷವಿಡೀ ನೀರಿರುವಂತೆ ನೋಡಿಕೊಳ್ಳಬೇಕು. ನಮ್ಮ ಮಕ್ಕಳು ಈಜು ಅಭ್ಯಾಸ ಮಾಡುವ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಿದರೆ, ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಸಂಚಾಲಕ ಎಸ್.ಎಸ್.ಭಟ್ ಲೋಕೇಶ್ವರ, ಈಜು ಶಿಕ್ಷಕ ಜಿ.ಸಿ.ಪಟಗಾರ, ಹಿರಿಯರಾದ ನಾಗೇಶ ಭಂಡರ್ಕರ್ ಮತ್ತು ವಿಷ್ಣುತೀರ್ಥದ ರಾಜು ಗಾವಡಿ ಅವರನ್ನು ಗೌರವಿಸಲಾಯಿತು. ಈಜು ಸ್ಪರ್ಧೆಯಲ್ಲಿ ವಿಜೇತರಾದ ಈಜುಪಟುಗಳಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆ ಆಯೋಜಕ ಬಾಬು ನಾಯ್ಕ ಸ್ವಾಗತಿಸಿದರು. ರೋಟೆರಿಯನ್ ಸಂದೀಪ ವಿಠಲ್ ನಾಯಕ ಅವರು ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಪ್ರೊ.ಎಂ.ಜಿ.ಭಟ್, ಡಾ.ಸತೀಶ ಪ್ರಭು, ವಾಸುದೇವ ಶಾನಭಾಗ, ರಾಜೇಶ ಪ್ರಭು ಇತರರು ಉಪಸ್ಥಿತರಿದ್ದರು.