ಹಳಿಯಾಳ: ಕಬ್ಬು ಬೆಳೆಗಾರರ ಹಲವು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವ ಸರ್ಕಾರದ ವಿರುದ್ಧ ಮತ್ತು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ವಿರುದ್ಧ ರೈತರು ಆರಂಭಿಸಿರುವ ಪ್ರತಿಭಟನೆ ಹೋರಾಟ ಏಳನೇ ದಿನ ಪೂರ್ಣಗೊಳಿಸಿದ್ದು, ಏಳನೇ ದಿನವಾದ ಗುರುವಾರ ಪ್ರತಿಭಟನೆ ಹಲವು ತಿರುವುಗಳನ್ನು ಪಡೆದುಕೊಂಡಿತು.
ಬೆಳಿಗ್ಗಿನಿಂದ ಶಾಂತಿಯುತವಾಗಿ ನಡೆದ ಪ್ರತಿಭಟನೆ ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ ಉಗ್ರರೂಪ ಪಡೆದುಕೊಂಡ ಲಕ್ಷಣಗಳು ಕಂಡುಬಂದವು. ಹೋರಾಟ ಆರಂಭವಾಗಿದ್ದರಿಂದ ಗುರುವಾರದ ಮಧ್ಯಾಹ್ನದವರೆಗೆ ಶಾಂತವಾಗಿ ನಡೆದಿದ್ದ ಕಬ್ಬು ಬೆಳೆಗಾರರ ಪ್ರತಿಭಟನೆ ಗುರುವಾರ ಮಧ್ಯಾಹ್ನ ಹೊತ್ತಿಗೆ ರಸ್ತಾರೋಕೋ ಸ್ವರೂಪಕ್ಕೆ ತಿರುಗಿದಾಗ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದ್ದ ವೇಳೆ ತಹಶೀಲ್ದಾರ್ ಮಧ್ಯಪ್ರವೇಶಿಸಿ ಯಾವುದೇ ಕಾರಣಕ್ಕೂ ಕಬ್ಬು ಬೆಳೆಗಾರರು ಕಾನೂನು ಕೈಗೆತ್ತಿಕೊಳ್ಳಬಾರದು. ಕಾನೂನಿನ ಪರಿಮಿತಿಯಲ್ಲಿಯೇ ಹೋರಾಟವನ್ನು ಮುಂದುವರಿಸಬೇಕು ಎಂದು ರೈತರಿಗೆ ಸೂಚನೆ ನೀಡಿದರು.
ಪ್ರತಿಭಟನಾಕಾರರು ಬಗ್ಗದೇ ಹೋದಾಗ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಪ್ರತಿಭಟನೆ ಆರಂಭದಿಂದಲೂ ಪ್ರತಿಭಟನಾಕಾರರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಆದರೂ ಗುರುವಾರದ ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿ ಪೊಲೀಸರ ಪಾಲಿಗೆ ಸ್ವಲ್ಪ ಬಿಗಡಾಯಿಸಿದಂತೆ ಕಂಡುಬಂದಿತು. ನಂತರ ಪೊಲೀಸರು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೊಬಾಟೆ, ಕಾರ್ಯದರ್ಶಿ ನಾಗೇಂದ್ರ ಜೀವೋಜಿ, ಶಂಕರ ಕಾಜಗಾರ, ರವಿದಾಸ್ ಬೆಳಗಾವಕರ, ಸಂತೋಷ ಅವರನ್ನು ಪ್ರತಿಭಟನಾ ಸ್ಥಳದಿಂದ ವಶಕ್ಕೆ ಪಡೆದು ಒಂದೆರಡು ಗಂಟೆಗಳ ಕಾಲದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ನಂತರ ಕೂಡ ಪ್ರತಿಭಟನೆ ಮುಂದುವರಿಸಿ ತಾಲೂಕಿನಲ್ಲಿ ಬೆಳೆದಿರುವ ಕಬ್ಬಿಗೆ ಮೊದಲ ಆದ್ಯತೆ ಕಟಾವು ಮಾಡಲು ನೀಡಬೇಕು. ಕಬ್ಬಿಗೆ ಎಫ್ಆರ್ಎಫ್ ದರ ನಿಗದಿಯಾದ ನಂತರ ಮತ್ತೊಮ್ಮೆ ಕಬ್ಬು ಬೆಳೆಗಾರರರೊಂದಿಗೆ ಸಭೆ ನಡೆಸಿ ಘೋಷಣೆ ಮಾಡಬೇಕು ಅಲ್ಲಿಯವರೆಗೆ ಕಬ್ಬು ಕಟಾವು ಪ್ರಕ್ರಿಯೆಗಳನ್ನು ಆರಂಭಿಸಬಾರದು ಎಂಬ ಬೇಡಿಕೆಗಳನ್ನು ಇಟ್ಟುಕೊಂಡು ಕಬ್ಬು ಬೆಳೆಗಾರರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು. ಕಬ್ಬು ಬೆಳೆಗಾರರು ಅಹೋರಾತ್ರಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸುವ ಘೋಷಣೆ ಮಾಡಿ ಧರಣಿ ಕುಳಿತರು. ಅನ್ಯ ತಾಲೂಕಿನಿಂದ ತರಲಾಗಿದ್ದ ಕಬ್ಬಿನ ಗಾಡಿಗಳನ್ನು ಅಲ್ಲಿಯೇ ತಡೆದು ಕಾರ್ಖಾನೆಗೆ ಕಬ್ಬನ್ನು ಸಾಗಿಸಲು ಬಿಡದೆ, ಅಲ್ಲಿಯೇ ತಡೆಹಿಡಿಯಲಾಯಿತು. ಸಂಜೆ 7 ಗಂಟೆಯವರೆಗೂ ನಿಂತಲ್ಲೇ ನಿಂತಿದ್ದವು.