ಕುಮಟಾ: ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ಸಾಗಿಸುತ್ತಿರುವುದನ್ನು ಗಮನಿಸಿದ ತಾಲೂಕಿನ ಬರ್ಗಿ ಗ್ರಾಮದ ಯುವಕರು ಅಕ್ರಮ ಮದ್ಯ ಸಾಗಾಟಗಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಲೂಕಿನ ಬರ್ಗಿಯ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಮದ್ಯ ತುಂಬಿದ ಕಾರು ಕೆಟ್ಟು ನಿಂತಿದ್ದು, ಕೆಟ್ಟು ನಿಂತಿದ್ದ ಕಾರಿನಲ್ಲಿ ಮದ್ಯ ಇರುವುದನ್ನು ಗಮನಿಸಿದ ಬರ್ಗಿಯ ಯುವಕರು ಕಾರನ್ನು ಹಿಡಿದಿಟ್ಟುಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಗೋಕರ್ಣ ಪೊಲೀಸರು, ಯುವಕರು ಹಿಡಿದಿಟ್ಟಿದ್ದ ಕಾರನ್ನು ಪರಿಶೀಲನೆ ನಡೆಸಿರುವ ಸಮಯದಲ್ಲಿ ಕಾರಿ ಒಳಗೆ ವಿವಿಧ ಬ್ರ‍್ಯಾಂಡ್‌ನ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಇರುವುದು ಪತ್ತೆಯಾಗಿದೆ.
ಈ ಮದ್ಯವನ್ನು ಸ್ಥಳೀಯ ಬಾರ್ ಒಂದರಿಂದ ಕಾರಿನಲ್ಲಿ ತಂದು ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಅಂಗಡಿಗಳಿಗೆ ಪೂರೈಕೆ ಮಾಡಲಾಗುತ್ತಿತ್ತು ಎನ್ನಲಾಗುತ್ತದೆ. ಸ್ಥಳಕ್ಕೆ ಆಗಮಿಸಿದ ಗೋಕರ್ಣ ಠಾಣೆಯ ಪೊಲೀಸರು ಕಾರು ಹಾಗೂ ಲಕ್ಷಾಂತರ ರೂಪಾಯಿ ಮದ್ಯ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಯಾವ ಯಾವ ಅಂಗಡಿಗಳಿಗೆ ಮದ್ಯ ಸಾಗಾಟ ಮಾಡಲಾಗುತ್ತಿತ್ತು ಎನ್ನುವ ಬಗ್ಗೆ ತನಿಖೆ ಕೈಗೊಂಡಿದ್ದಾರೆ.