ಶಿರಸಿ: ಉತ್ತರ ಕನ್ನಡ ಮೂಲದ ಲೇಖಕಿ ಮಾಲತಿ ಹೆಗಡೆ ಅವರ ನೆಲದ ನಂಟು ಕೃತಿಗೆ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯವು ನೀಡುವ ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ ಪ್ರಕಟವಾಗಿದೆ.
ಮೂಲತಃ ಜಿಲ್ಲೆಯ ಶಿರಸಿ ತಾಲೂಕಿನ ಕೂಗಲಕುಳಿಯ ಮಾಲತಿ ಹೆಗಡೆ ಅವರು ಸದ್ಯಕ್ಕೆ ಮೈಸೂರು ನಿವಾಸಿಯಾಗಿದ್ದಾರೆ. ಪ್ರಜಾವಾಣಿಯಲ್ಲಿ ‘ವಿಭಿನ್ನ ನೋಟ ವಿಶಿಷ್ಟ ತೋಟ’ ‘ಮನೆ ಊಟ ಮನೆ ಮದ್ದು’ ‘ದೇಸಿ ಅಡುಗೆ, ವಿಜಯವಾಣಿಯಲ್ಲಿ ‘ಸಾಂಗತ್ಯ’ ಅಂಕಣ ಬರಹ ಪ್ರಕಟವಾಗಿದೆ. ಕನ್ನಡದ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ, ಉದಯವಾಣಿ, ಕರ್ಮವೀರ ಸುಧಾ, ತರಂಗ ಇವುಗಳಲ್ಲಿ ಕೃಷಿ, ಪರಿಸರ, ಮಹಿಳೆಯರ ಕುರಿತಾದ ಲೇಖನಗಳು, ಕಥೆ, ಕವಿತೆ, ಗಜಲ್ಗಳು ಪ್ರಕಟವಾಗಿವೆ.
ಸಾಧಕಿಯರ ಬಗ್ಗೆ ಬರೆದ ವನಿತೆಯರ ಆತ್ಮಶ್ರೀ ಅಂಕಣ ಬರಹಗಳ ಸಂಗ್ರಹ, ಕೃಷಿಕರ ಯಶೋಗಾಥೆಗಳು ‘ನೆಲದ ನಂಟು ಪ್ರಕಟಿತ ಪುಸ್ತಕಗಳು, ಮನೆ ಊಟ ಮನೆಮದ್ದು ಅಂಕಣ ಬರಹಗಳ ಸಂಕಲನ ‘ತುತ್ತು ಎತ್ತುವ ಮೊದಲು’, ಕಥಾ ಸಂಕಲನ ಅವನಿಯೊಡಲು ಅಚ್ಚಿನಲ್ಲಿದೆ.
ಕೃಷಿಯ ವಿಭಿನ್ನ ಪ್ರಯತ್ನ ಮಾಡಿದ ಮೂವತ್ತೈದು ಕೃಷಿಕರು, ಕೈತೋಟಿಗರ ಕ್ಷೇತ್ರ ಭೇಟಿ ಮಾಡಿ ಸಂದರ್ಶಿಸಿ, ಅವರ ಅನುಭವ ಸಾರವನ್ನು ತೆಗೆದು ಬರೆದ ಲೇಖನ ಸಂಗ್ರಹ ‘ನೆಲದ ನಂಟು’ ಪುಸ್ತಕದ ಉಪಯುಕ್ತತೆಯನ್ನು ಮನಗಂಡ ವಿಶ್ವ ವಿದ್ಯಾಲಯವು ಪುಸ್ತಕ ಬಹುಮಾನ ಪ್ರಕಟಿಸಿದೆ. ಮಾಲತಿ ಹೆಗಡೆ ಅವರು ಪ್ರಸಿದ್ದ ಸಾಹಿತಿ, ಅರ್ಥದಾರಿ ದಿವಾಕರ ಹೆಗಡೆ ಕೆರೆಹೊಂಡ ಅವರ ಪತ್ನಿ.