ಕುಮಟಾ: ಕುಮಟಾ-ಶಿರಸಿ-ತಡಸ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರಿಗೆ ಬಹಳಷ್ಟು ತೊಂದರೆಯಾಗಿದೆ. ಈ ಕುರಿತಂತೆ ಕ್ರಮ ವಹಿಸಲು ಸೂಚನೆ ನೀಡಬೇಕು ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿಪಂ ಮಾಜಿ ಸದಸ್ಯ ಗಜಾನನ ಪೈ ಅವರು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
ಗೋಕರ್ಣಕ್ಕೆ ತೆರಳುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕುಮಟಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭೇಟಿಯಾದ ಗಜಾನನ ಪೈ ಅವರು ವಿಷಯದ ಕುರಿತು ಮನವರಿಕೆ ಮಾಡಿದರು. ಕುಮಟಾ-ಶಿರಸಿ-ತಡಸ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಕುಂಟುತ್ತ ಸಾಗುತ್ತಿದ್ದು, ಘಟ್ಟದ ಕೆಳಗಿನಿಂದ ಶಿರಸಿಗೆ ತೆರಳುವ ಪ್ರಮುಖ ರಸ್ತೆಯಾಗಿದೆ. ರಸ್ತೆಯಲ್ಲಿ ಎಲ್ಲಿ ನೋಡಿದರೂ ಹೊಂಡ-ಗುಂಡಿಗಳಿಂದ ಕೂಡಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ಸವಾರರು ಪ್ರತಿನಿತ್ಯ ಹಿಡಿಶಾಪ ಹಾಕುವಂತಾಗಿದೆ. ಈ ಬಗ್ಗೆ ಗುತ್ತಿಗೆ ಪಡೆದ ಆರ್ಎನ್ಎಸ್ ಕಂಪೆನಿಯನ್ನು ಪ್ರಶ್ನಿಸಿದರೆ, ಜೆಲ್ಲಿಕಲ್ಲು ಸಿಗುತ್ತಿಲ್ಲ. ಕಂದಾಯ ಇಲಾಖೆಯಿಂದ ಭೂಸ್ವಾಧೀನ ಪ್ರಕ್ರಿಯೆ ಮುಗಿದಿಲ್ಲ. ಇದರಿಂದ ಕಾಮಗಾರಿ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಉತ್ತರ ನೀಡುತ್ತಿದ್ದಾರೆ. ಕೇವಲ 15 ಕಿ.ಮೀ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿ, ಉಳಿದ ಕಡೆಗಳಲ್ಲಿ ಮಣ್ಣು ತೆಗೆದು ಕಾಂಕ್ರಿಟ್ ಕಲ್ವರ್ಟ್ಗಳ ನಿರ್ಮಾಣ ಮಾಡಿ ಅರ್ಧಂಬರ್ಧ ಕಾಮಗಾರಿ ನಡೆಸಿ, ನಿಲ್ಲಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತುರ್ತಾಗಿ ಡಾಂಬರೀಕರಣ ಕೆಲಸ ನಿರ್ವಹಿಸಲು ಆದೇಶಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಆರ್ಎನ್ಎಸ್ ಕಂಪೆನಿಯ ಹಿರಿಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸಿದರು. ಈ ವಾರದೊಳಗಡೆ ಸಭೆ ಕರೆಯಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಆರ್ಎನ್ಎಸ್ ಕಂಪೆನಿಯ ಅಧಿಕಾರಗಳು ಕಡ್ಡಾಯವಾಗಿ ಹಾಜರಿಸಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪ್ರಮುಖರಾದ ವಿನೋದ ಪ್ರಭು, ಗಜಾನನ ಗುನಗಾ, ಕುಮಾರ ಮಾರ್ಕಾಂಡೆ, ತುಳಸು ಗೌಡ, ಕಾರ್ತಿಕ ಭಟ್ಟ ಕತಗಾಲ, ಗಣಪತಿ ನಾಯ್ಕ ಇತರರಿದ್ದರು.