ಶಿರಸಿ: ಪಿಎಫ್ಐ ಹಾಗೂ ಇತರೆ ಅಂಗ ಸಂಸ್ಥೆಗಳನ್ನು ಕೇಂದ್ರದ ಗೃಹ ಸಚಿವಾಲಯ ನಿಷೇಧ ಮಾಡಿರುವುದು ಅತ್ಯಂತ ಸ್ವಾಗತಾರ್ಹ. ಈ ದಿಟ್ಟ ಕ್ರಮವನ್ನು ತೆಗೆದುಕೊಂಡಿರುವ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಮಾನ್ಯ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದ್ದಾರೆ.
ಪಿಎಫ್ಐ ಸಂಘಟನೆ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಅನೇಕ ಹತ್ಯೆ, ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಿತ್ತು. ಕಾನೂನು – ಸುವ್ಯವಸ್ಥೆ ಹದಗೆಡಿಸುವ ಮತ್ತು ಸಮಾಜ ಒಡೆಯುವ ವಿಚ್ಛಿದ್ರಕಾರೀ ಶಕ್ತಿಗಳನ್ನು ಮಟ್ಟಹಾಕಲು ಕೇಂದ್ರದ ಬಿಜೆಪಿ ಸರ್ಕಾರ ಅತ್ಯಂತ ಸೂಕ್ತ ಕ್ರಮವನ್ನು ಕೈಗೊಂಡಿದೆ.
ವಾರದ ಹಿಂದೆ ನೂರಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಅವರು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿರುವುದಕ್ಕೆ ಮತ್ತಷ್ಟು ಪುರಾವೆ ಲಭಿಸಿದೆ. ಎಲ್ಲೆಡೆ ತನ್ನ ಜಾಲವನ್ನು ವಿಸ್ತರಿಸುವ, ಭಯೋತ್ಪಾದಕ ಕೃತ್ಯವೆಸಗುವ ಹುನ್ನಾರ ಹೊಂದಿದ್ದ ಪಿಎಫ್ಐ ಮತ್ತು ಇತರ ಅಂಗಸಂಸ್ಥೆಗಳ ಹೆಡೆಮುರಿ ಕಟ್ಟುವ ಕೇಂದ್ರ ಸರ್ಕಾರದ ಈ ದಿಟ್ಟ ಕ್ರಮವನ್ನು ಸಮಸ್ತ ದೇಶವಾಸಿಗಳು ಬೆಂಬಲಿಸುತ್ತಾರೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.