ಅಂಕೋಲಾ/ ಯಲ್ಲಾಪುರ: ಹೈಕೋರ್ಟ್ ಸೂಚನೆಯಂತೆ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯ ಪರಿಶೀಲನೆಯ ಕೇಂದ್ರ ತಂಡ ಅಂಕೋಲಾ- ಯಲ್ಲಾಪುರ ತಾಲೂಕುಗಳ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಹೆಚ್ಚುವರಿ ಅರಣ್ಯ ಮಹಾನಿರ್ದೇಶಕ (ಅರಣ್ಯ ಸಂರಕ್ಷಣೆ), ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸದಸ್ಯರುಗಳಾದ (ಎಸ್‌ಸಿ-ಎನ್‌ಬಿಡಬ್ಲುಎಲ್) ಡಾ.ಹೆಚ್.ಎಸ್.ಸಿಂಗ್ ಹಾಗೂ ಡಾ.ಆರ್.ಸುಕುಮಾರ್, ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರ ಪ್ರತಿನಿಧಿ, ಡೆಹ್ರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆಯ ನಿರ್ದೇಶಕರ ಪ್ರತಿನಿಧಿ, ಡೆಹ್ರಾಡೂನ್ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ ಡೈರೆಕ್ಟರ್ ಜನರಲ್ ಪ್ರತಿನಿಧಿ ಹಾಗೂ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಫಾರೆಸ್ಟ್ (ವನ್ಯಜೀವಿ) ಅಧಿಕಾರಿಗಳ ತಂಡ ಅಂಕೋಲಾದ ನವಗದ್ದೆ, ಕಂಚಿನಬಾಗಿಲು, ಸುಂಕಸಾಳ ಕೋಟೆಪಾಲ, ರಾಮನಗುಳಿ ಮುಂತಾದ ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗಲಿರುವ ರೈಲ್ವೆ ಮಾರ್ಗದ ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಿದರು.
ಅರಣ್ಯ ಇಲಾಖೆಯ ವರದಿಗಳ ಪ್ರಕಾರ ಯೋಜನಾ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಉಂಟಾಗುವ ಹಾನಿಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ರೈಲ್ವೆ ಲೈನ್ ಹಾದು ಹೋಗಲಿರುವ ಸ್ಥಳದ ಗೂಗಲ್ ಜಿಪಿಎಸ್ ಮಾಹಿತಿ ಪರಿಶೀಲಿಸಿ ಈ ಭಾಗದಲ್ಲಿ ಸೂಕ್ಷ್ಮ ವಲಯದಿಂದ ಬರುವ ಹುಲಿ, ಆನೆಗಳ ಸಂಚಾರಕ್ಕೆ ತೊಡಕಾಗದಂತೆ ಯೋಜನೆ ರೂಪಿತವಾಗಿದೆಯೇ ಎನ್ನುವದರ ಬಗ್ಗೆಯೂ ಚರ್ಚಿಸಿದರು.
ಸರಿ ಸುಮಾರು 28 ಕಿ.ಮೀ. ಸುರಂಗ ಮಾರ್ಗವನ್ನೇ ಹೊಂದಿದ ಈ ಪರಿಷ್ಕ್ರತ ಯೋಜನೆಯಲ್ಲಿ ಮುಂದಿನ ಅರ್ಧ ಶತಮಾನದ ನಂತರ ಈ ಭಾಗದಲ್ಲಿ ವನ್ಯ ಜೀವಿಗಳ ಸಂಖ್ಯೆ ಏರಿಕೆಯಾಗಲಿದೆಯೇ ಎನ್ನುವದರ ಬಗ್ಗೆಯೂ ವನ್ಯ ಜೀವಿ ಸಂರಕ್ಷಣೆಯ ಅಧಿಕಾರಿ ಹಾಗೂ ಪರಿಣಿತರೊಂದಿಗೆ ಚರ್ಚಿಸಿದರು. ಕೇಂದ್ರ ಪರಿಶೀಲನಾ ತಂಡದ ಜೊತೆ ಅಪರ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ ರಾಘವೇಂದ್ರ ಜಗಲಾಸರ, ಕಂದಾಯ ಅಧಿಕಾರಿಗಳು, ಕಾರವಾರ ಅಂಕೋಲಾದ ತಹಶೀಲ್ದಾರರು, ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.