ಸಿದ್ದಾಪುರ: ಪಟ್ಟಣದ ವ್ಯಾಪ್ತಿಯಲ್ಲಿಯ ಸುಗಮ ಸಂಚಾರಕ್ಕೆ ಹಾಗೂ ಸೌಂದರ್ಯಕರಣವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಪಟ್ಟಣದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಇಲಾಖೆ ಕಳೆದ ಒಂದೂವರೆ ವರ್ಷದ ಹಿಂದೆ ಮುಂದಾಗಿತ್ತು. ರಸ್ತೆ ನಿರ್ಮಾಣ ಕಾರ್ಯಕ್ಕೆ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿಕೊಂಡು ಕೆಲಸ ಪ್ರಾರಂಭಿಸಿತ್ತು. ಅದರಂತೆ ಲೋಕೋಪಯೋಗಿ ಇಲಾಖೆ ಮೊದಲ ಹಂತದ ರೂ.5 ಕೋಟಿ ಅನುದಾನವನ್ನು ಮಂಜೂರಿ ಮಾಡಿ ರಸ್ತೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ಮುಂದಿನ ಕಾಮಗಾರಿಗಳಿಗೆ ಎರಡು ಹಂತದಲ್ಲಿ ಒಟ್ಟು ರೂ.14 ಕೋಟಿ ಅನುದಾನವನ್ನು ಮಂಜೂರಿ ಮಾಡಿದೆ. ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಲಿದೆ.
ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿರುವ ಸಿದ್ದಾಪುರ ಪ್ರಗತಿಯತ್ತ ಸಾಗುತ್ತಿದೆ. ಹಲವು ಅಭಿವೃದ್ಧಿ ಕಾರ್ಯಗಳು ಆಗಿವೆ, ಆಗುತ್ತಿವೆ. ಅವುಗಳಿಗೆ ಹೊಸ ಸೇರ್ಪಡೆ ಎನ್ನುವಂತೆ ಪಟ್ಟಣದಲ್ಲಿ ಚತುಷ್ಪದ ರಸ್ತೆ ನಿರ್ಮಾಣ ಕಾರ್ಯ ಆಗಿದೆ. ಮುಂದೆ ಆಗುತ್ತಿದೆ. ಕ್ಷೇತ್ರದ ಶಾಸಕರಾಗಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿಶೇಷವಾದ ಆಸಕ್ತಿಯಿಂದ ಅನುದಾನವನ್ನು ಮಂಜೂರಿ ಮಾಡಿಸಿದ್ದಾರೆ. ದೊಡ್ಡ ನಗರಗಳ ಮಾದರಿಯಲ್ಲಿ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಲು ಇದು ಕಾರಣವಾಗಲಿದೆ. ಇದರಿಂದ ವಾಹನ ಸವಾರರಿಗೆ ಸುಗಮ ಸಂಚಾರ ಸಾಧ್ಯವಾಗಲಿದೆ.ಈ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆ ಸಿದ್ಧಮಾಡಿಕೊಂಡಿರುವ ಯೋಜನೆಗೆ ಸರ್ಕಾರ ಅನುದಾನ ಒದಗಿಸಿದೆ.
ಪಟ್ಟಣದ ಶಿರಸಿ ರಸ್ತೆಯ ಕೋರ್ಟ ಬಳಿಯಿಂದ ಹೊಸೂರಿನ ಜೋಗ ಕ್ರಾಸ್ ವರೆಗಿನ ಪಟ್ಟಣದ ವ್ಯಾಪ್ತಿಯಲ್ಲಿ ಹಾದು ಹೋಗುವ ರಸ್ತೆಯನ್ನು ಚತುಷ್ಪದ ಮಾರ್ಗವನ್ನಾಗಿ ಮಾಡುವ ಯೋಜನೆ ಇದಾಗಿದೆ. 16 ಮೀಟರ್ ಅಗಲದಲ್ಲಿ ಮಾಡಲಾಗುವ ರಸ್ತೆಯಲ್ಲಿ ಮೀಡಿಯನ್ ಮೂಲಕ ಹೋಗುವ ಮತ್ತು ಬರುವ ಮಾರ್ಗವನ್ನು ಪ್ರತ್ಯೇಕಿಸಲಾಗುತ್ತದೆ. ರಸ್ತೆಯ ಮಧ್ಯೆ ವಿದ್ಯುತ್ ದೀಪಗಳ ಅಳವಡಿಸಲಾಗುತ್ತಿದೆ. ರಸ್ತೆಯ ಪಕ್ಕದಲ್ಲಿ ಪಕ್ಕಾ ಗಟಾರ ನಿರ್ಮಾಣ ಮಾಡಿ, ಅದರ ಮೇಲೆ ಪಾದಚಾರಿ ಮಾರ್ಗವನ್ನು ಮಾಡಲಾಗುತ್ತದೆ. ಉಳಿದಂತೆ ಟೇಲಿಪೋನ್, ವಿದ್ಯುತ್, ಇತರ ಮಾರ್ಗಗಳನ್ನು ಒಳಗೊಂಡಿರುತ್ತದೆ.
ರಸ್ತೆ ನಿರ್ಮಾಣ ಯೋಜನೆ: ಪಟ್ಟಣ ಪರಿಮಿತಿಯಲ್ಲಿ ಖಾನಾಪುರ- ತಾಳಗುಪ್ಪ ರಾಜ್ಯ ಹೆದ್ದಾರಿ ಸುಧಾರಣೆ. ರೂ.5 ಕೋಟಿ ಅನುದಾನದಲ್ಲಿ. 850 ಮೀಟರ್ ಉದ್ದಕ್ಕೆ ಚತುಷ್ಪಥ ರಸ್ತೆಯನ್ನಾಗಿ ನಿರ್ಮಾಣ. ನಡುವೆ 1 ಮೀಟರ್ ಅಗಲದ ಮೀಡಿಯನ್. ಉಳಿದಂತೆ ಎರಡು ಮಾರ್ಗದಲ್ಲಿ 7.50 ಮೀಟರ್ ಅಗಲದ ರಸ್ತೆಯಾಗಲಿದೆ. ಎರಡು ಬದಿಗೆ ಆರ್.ಸಿ.ಸಿ ಪಕ್ಕಾ ಗಟಾರ. ಎಂಟು ಸ್ಲಾಬ್ ಕಲ್ವರ್ಟ್ ಅಡ್ಡ ಮೋರಿಗಳು. ತಿಮ್ಮಪ್ಪ ನಾಯಕ ವೃತ್ತ ಹಾಗೂ ರಾಮಕೃಷ್ಣ ಹೆಗಡೆ ವೃತ್ತಗಳ ಅಭಿವೃದ್ಧಿ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವುದು. ರಸ್ತೆಯ ಉದ್ದಕ್ಕೆ ಹಾಗೂ ರಸ್ತೆಗೆ ಅಡ್ಡವಾಗಿ ಯುಟಿಲಿಟಿ ಡಕ್ಟಗಳನ್ನು ಅಳವಡಿಸುವುದು ಯೋಜನೆಯಲ್ಲಿದೆ.
ಕಾಮಗಾರಿಗಳ ವಿವರ: ಪಟ್ಟಣದ ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ 93 ರಸ್ತೆಯ ಕಿ.ಮೀ.184.68ರಿಂದ 185.53ರವರೆಗೆ ಚತುಷ್ಪಥ ರಸ್ತೆ ನಿರ್ಮಾಣ ರೂ.5 ಕೋಟಿ ಕಾಮಗಾರಿಯ ಉದ್ಘಾಟನೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-4 ಘಟ್ಟ-2 ಅಡಿಯಲ್ಲಿ ಸಿದ್ದಾಪುರ ತಾಲೂಕಿನ ಸಿದ್ದಾಪುರ ಪಟ್ಟಣದ ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ 93 ರಸ್ತೆಯ ಕಿ.ಮೀ.184ರಿಂದ 186.60ರವರೆಗೆ ಚತುಷ್ಪಥ ರಸ್ತೆ ನಿರ್ಮಾಣ ರೂ.9 ಕೋಟಿ ಕಾಮಗಾರಿಯ ಶಂಕುಸ್ಥಾಪನೆ. ಭಟ್ಕಳ- ಸೊರಬ ರಾಜ್ಯ ಹೆದ್ದಾರಿ 50 ಕಿ.ಮೀ. 85.90ರಿಂದ 100.90 ಕಿ.ಮೀ.ರವರೆಗೆ ರಸ್ತೆ ಸುಧಾರಣೆ ರೂ.5 ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಇಂದು ನೆರೆವೇರಲಿದೆ.
ಬೆಳೆಯುತ್ತಿರುವ ತಾಲೂಕಿನ ಅಗತ್ಯತೆಗಳು ಏನೇನು ಇದೆ, ಅದನ್ನೂ ಪೂರೈಸುವುದಕ್ಕೆ ಶಾಸಕನಾಗಿ,ಸಭಾಧ್ಯಕ್ಷನಾಗಿ ಸರ್ಕಾರದಿಂದ ಎಲ್ಲಾ ರೀತಿಯ ಯೋಜನೆಗಳ ತಂದು ಅಭಿವೃದ್ಧಿ ಆಗುವುದಕ್ಕೆ ನಾನು ನನ್ನೆಲ್ಲ ಪ್ರಯತ್ನ ಮಾಡುತ್ತಿದ್ದೇನೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ.ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಹಿಂದಿನಿಂದಲೂ ಮಾಡಲಾಗುತ್ತದೆ. ಮುಂದೆಯೂ ಕೂಡ ಆಗಬೇಕಾಗಿರುವ ಕೆಲಸ ಕಾರ್ಯಗಳಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ
ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ