ಕುಮಟಾ: ಜಗತ್ತಿನ ಇತರೆಲ್ಲ ರಾಷ್ಟ್ರಗಳು ಅಕ್ಷರದ ಅರಿವನ್ನು ಹೊಂದಿರದ ಹೊತ್ತಿನಲ್ಲಿ ಭಾರತದಲ್ಲಿ ಅಪೌರುಷೇಯವಾದ ವೇದಗಳ ಆವಿರ್ಭಾವವಾಗಿತ್ತು. ಅಲ್ಲದೆ ಸಂಸ್ಕೃತದ ಕಾವ್ಯ- ನಾಟಕಗಳ ಸೃಷ್ಟಿಯಾಗಿ ಬೋಧನೆಯಾಗುತ್ತಿದ್ದುದು ಈ ನೆಲದ ಸಾಂಸ್ಕೃತಿಕವಾದ ಹಿರಿಮೆಯೆಂದು ಉ.ಕ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಈಶ್ವರ ನಾಯ್ಕ ನುಡಿದರು.
ಅವರು ನಗರದ ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕರ್ನಾಟಕ ಸಂಸ್ಕೃತ ಪರಿಷತ್ ಹಾಗೂ ಕುಮಟಾ ತಾಲೂಕಾ ಸಂಸ್ಕೃತ ಅಧ್ಯಾಪಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕಾ ಮಟ್ಟದ ಸಂಸ್ಖೃತ ಬೋಧಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನ್ನಾಡಿದರು.
ಸಂಸ್ಖೃತವು ವಿಶ್ವಮಾನ್ಯವಾದ ಭಾಷೆಯಾಗಿದ್ದು, ಸಂಸ್ಕೃತದ ಅಭ್ಯಾಸಿಗಳು ಸುಸಂಸ್ಕೃತರಾಗಿ ಸಾಮಾಜಿಕವಾಗಿ ವಿಶೇಷವಾದ ಮನ್ನಣೆಗೆ ಪಾತ್ರರಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಂಸ್ಕೃತದ ಕಲಿಕೆಗೆ ಸರ್ಕಾರವು ವಿಶೇಷವಾದ ಪ್ರಾಶಸ್ತ್ಯ ನೀಡಿದ್ದು, ಸಂಸ್ಕೃತವನ್ನು ಕಲಿಯುವರಿಂದ ಇತರ ಭಾಷೆ ಹಾಗೂ ವಿಷಯಗಳಲ್ಲಿ ಸಿದ್ಧಿಯು ಸಾಧ್ಯವೆಂದ ಅವರು, ಸಂಸ್ಕೃತವನ್ನು ಕಲಿತವರಿಗೆ ವಿಫುಲವಾದ ಉದ್ಯೋಗಾವಕಾಶವಿದೆಯೆಂದು ಸಂಸ್ಕೃತದ ಕಲಿಕೆಗೆ ಕರೆಗೊಟ್ಟರು.
ಕರ್ನಾಟಕ ಸಂಸ್ಕೃತ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಗಾಂವಕರ್ ಬರ್ಗಿ, ಉಳಿದ ಭಾಷೆಗಳಂತೆ ಸಂಸ್ಕೃತವು ಮನುಷ್ಯ ಸೃಷ್ಟಿಯಾಗಿರದೇ, ಭಗವಂತನ ಕೊಡುಗೆಯಾಗಿದೆ. ಮಿಕ್ಕುಳಿದ ಭಾಷೆಗಳೊಂದಿಗೆ ಅನನ್ಯವಾದ ಸಂಬಂಧವನ್ನು ಹೊಂದಿದ್ದು, ಇದರ ಸಾಹಿತ್ಯ-ಇತಿಹಾಸ-ಪರಂಪರೆಗಳನ್ನು ಅವಲೋಕೊಕಿಸಿದ್ದಲ್ಲಿ ಭರತ ವರ್ಷದ ಸಂಸ್ಖೃತಿಯ ವಿಶ್ವ ವಿರಾಟ ಸ್ವರೂಪದ ದರ್ಶನವಾಗಲು ಸಾಧ್ಯವೆಂದರು.
ತಾಲೂಕಾ ಸಂಸ್ಖೃತ ಅಧ್ಯಾಪಕರ ಸಂಘದ ಅಧ್ಯಕ್ಷ ಐ.ವಿ.ಭಟ್ಟ, ಸಂಸ್ಕೃತವು ಯಾರಿಗೂ ಮೀಸಲಾದ ಭಾಷೆಯಾಗಿರದೇ, ತನ್ನನ್ನೊಪ್ಪುವವರನ್ನು ಹಾರ್ದಿಕವಾಗಿ ತನ್ನ ತೆಕ್ಕೆಯಲ್ಲಿ ಬಿಗಿದಪ್ಪುವ, ಯಾರಲ್ಲಿಯೂ ಒಡಕನ್ನು ಮೂಡಿಸದ, ಎಲ್ಲರನ್ನೂ ಒಗ್ಗೂಡಿಸಬಲ್ಲ ಏಕೈಕ ಸಾಧನವಾದ, ರಾಮನ ನಡೆಯ ಮತ್ತು ಕೃಷ್ಣನ ನುಡಿಯ ಆದರ್ಶವನ್ನು ಜಗತ್ತಿಗೆ ನೀಡಿದ, ಮನುಷ್ಯನನ್ನು ಮಾಧವನನ್ನಾಗಿಸುವ ಮಹೋನ್ನತವಾದ ಭಾಷೆಯಾಗಿದೆ ಎಂದರು.
ತಾಲೂಕಿನಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಭಾಷೆ ಸಂಸ್ಕೃತ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಹಾಗೂ ತೃತೀಯ ಭಾಷೆ ಸಂಸ್ಕೃತ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದ ಒಟ್ಟು 128 ವಿದ್ಯಾರ್ಥಿಗಳಿದ್ದು, ಅವರಲ್ಲಿ ಪ್ರತಿ ಶಾಲೆಯಿಂದ ಓರ್ವ ಅರ್ಹ ಬಡ ವಿದ್ಯಾರ್ಥಿಗೆ ತಲಾ 500 ರು. ನಂತೆ ಒಟ್ಟು 10 ವಿದ್ಯಾರ್ಥಿಗಳಿಗೆ 5000 ರು.ಗಳನ್ನು ಗಿಬ್ ಬಾಲಕರ ಪ್ರೌಢಶಾಲೆಯ ವಿಶ್ರಾಂತ ಸಂಸ್ಕೃತ ಅಧ್ಯಾಪಕ ಉಮೇಶ ಭಟ್ಟ ವಿತರಿಸಿದರು. ಸಂಸ್ಕೃತಕ್ಕೆ 125ಕ್ಕೆ 125 ಅಂಕಗಳನ್ನು ಪಡೆದಿದ್ದಲ್ಲದೇ 625 ಕ್ಕೆ 626 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮಳಾದ ಸಿವಿಎಸ್ಕೆ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಜನಾ ಜಯರಾಮ ಭಟ್ಟ, ತಾನು ಸಂಸ್ಕೃತವನ್ನು ಅಭ್ಯಸಿಸಿ ಪ್ರತಿಭಾ ಪುರಸ್ಕಾರಕ್ಕೆ ಭಾಜನಳಾದ ಬಗ್ಗೆ ಧನ್ಯತೆಯಿದೆ ಎಂದರು.
ಜನತಾ ವಿದ್ಯಾಲಯ, ಮಿರ್ಜಾನ-ಕೋಡ್ಕಣಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಜು ನಾಯ್ಕ ಸ್ವಾಗತಿಸಿದರು. ಸಿವಿಎಸ್ಕೆ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ಸುರೇಶ ಹೆಗಡೆ ವಂದಿಸಿದರು. ಕರ್ನಾಟಕ ಪಬ್ಲಿಕ್ ಸ್ಕೂಲ್ನ ಶಿಕ್ಷಕಿ ಗೀತಾ ಭಟ್ಟ ನಿರೂಪಿಸಿದರು. ಮುಖ್ಯಾಧ್ಯಾಪಕ ಶಿವಾನಂದ ಭಟ್ಟ, ಶಿಕ್ಷಕರಾದ ಭಾಸ್ಕರ ಭಟ್ಟ, ಸುವರ್ಣಾ ಬಂಟ, ಪರಮೇಶ್ವರ ಭಟ್ಟ, ಮಂಜುಳಾ ಕುಮಟಾಕರ್, ಬಾಲಕೃಷ್ಣ ಭಟ್ಟ, ಪಾರ್ವತಿ ಭಟ್ಟ ಹಾಗೂ ರೋಹಿತ್ ಹೆಬ್ಬಾರ ಮೊದಲಾದವರಿದ್ದರು.