ಅಂಕೋಲಾ: ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಬೇಕಾದರೆ ಯುವ ಜನಾಂಗಕ್ಕೆ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸಬೇಕಾಗಿದೆ ಎಂದು ನಿವೃತ್ತ ಗ್ರಂಥಪಾಲಕ, ಲೇಖಕ ಮಹಾಂತೇಶ ರೇವಡಿ ಅಭಿಪ್ರಾಯಪಟ್ಟರು.
ಅವರು ಅಂಕೋಲಾ ತಾಲೂಕು ಅಚವೆಯ ಪಹರೆ ವೇದಿಕೆ ಹಮ್ಮಿಕೊಂಡಿದ್ದ 24ನೇ ವಾರದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿ, ಸ್ವಚ್ಛ ಭಾರತ ಗಾಂಧೀಜಿಯವರ ಕನಸಾಗಿತ್ತು. ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಕಳೆದರೂ ಇಂದಿಗೂ ಸ್ವಚ್ಛ ಭಾರತದ ಕನಸು ಸಂಪೂರ್ಣವಾಗಿ ಈಡೇರಿಲ್ಲ. ಸ್ವಚ್ಛ ಭಾರತದಿಂದ ನಮ್ಮ ರಾಷ್ಟ್ರ ಎದುರಿಸುತ್ತಿರುವ ಬಹುತೇಕ ಆರೋಗ್ಯ ಸಮಸ್ಯೆಗಳು ಕಡಿಮೆಯಾಗಲಿವೆ ಎಂದರು.
ಯಕ್ಷಗಾನ ಕಲಾವಿದ ಹೊನ್ನಪ್ಪ ನಾಯಕ ವಂದಿಗೆ ಮಾತನಾಡುತ್ತ, ಯಾವುದೇ ಹೊಸ ಅಭಿಯಾನ ಹುಟ್ಟು ಹಾಕುವುದು ದೊಡ್ಡ ಕಾರ್ಯವೇನಲ್ಲ. ಆದರೆ ಅದನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುವುದು ಅಭಿನಂದನೆಯ ಕಾರ್ಯವೆಂದರು. ಅಚವೆಯ ಯುವಕರ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಬಗ್ಗೆ ಶ್ಲಾಘಿಸಿದರು.
ಇನ್ನೋರ್ವ ಅತಿಥಿ ಪ್ರಕಾಶ ಅಂಕೋಲೆಕರ ಅಚವೆಯ ಯುವಕರ ಸ್ವಚ್ಛತಾ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಪಹರೆ ವೇದಿಕೆಯ ಮುಖ್ಯಸ್ಥ ರಾಮಚಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನು ಸ್ವಾಗತಿಸಿದರು. ಸದಸ್ಯರಾದ ಶಾಂತಾರಾಮ ನಾಯಕ, ಸುಬ್ರಹ್ಮಣ್ಯ ನಾಯಕ, ತಿಮ್ಮಣ್ಣ ನಾಯಕ, ರಾಮದಾಸ ನಾಯ್ಕ, ಕಮಲಾಕರ ನಾಯ್ಕ, ಪ್ರಶಾಂತ ನಾಯ್ಕ, ಲತೀಶ ನಾಯಕ, ತಮ್ಮಣ್ಣ ಅಚವೆ ಇತರರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.