Slide
Slide
Slide
previous arrow
next arrow

ಅ.9ಕ್ಕೆ ಜಿಲ್ಲಾ ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ; ಪೂರ್ವಭಾವಿ ಸಭೆ ನಡೆಸಿದ ಡಿಸಿ

300x250 AD

ಕಾರವಾರ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅ.9ರಂದು ಜಿಲ್ಲಾ ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವ ಕುರಿತಾಗಿ ಸೋಮವಾರದಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ನೇತೃತ್ವ ವಹಿಸಿದ ಜಿಲ್ಲಾಧಿಕಾರಿಗಳು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೇರಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆಯಲ್ಲಿ ಭಾಗವಹಿಸಿ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ನಗರದ ಪ್ರಮುಖ ರಸ್ತೆಗಳಾದ ಡಾ. ಪಿಕಳೆ ರಸ್ತೆ, ಡಾ. ಅಂಬೇಡ್ಕರ ವೃತ್ತ, ನೇತಾಜಿ ಸರ್ಕಲ್ ಮುಖಾಂತರ ಸೆಂಟ್ ಮೈಕೆಲ್ ಹೈಸ್ಕೂಲ್ ರಸ್ತೆಯ ನೇರವಾಗಿ ಮಹಾತ್ಮ ಗಾಂಧೀಜಿ ರಸ್ತೆಯ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ನೇರವಾಗಿ ಬೈಕ್ ರ‍್ಯಾಲಿಯಲ್ಲಿ ಜನರೊಂದಿಗೆ ಮೆರವಣಿಗೆ ಮಾಡಲು ಹಾಗೂ ಜಿಲ್ಲಾ ರಂಗಮಂದಿರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಕಲಾ ತಂಡಗಳನ್ನು ಆಹ್ವಾನಿಸಲು ತಿಳಿಸಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಎಲ್ಲ ಶಾಲಾ, ಕಾಲೇಜುಗಳಿಗೆ ಸುತ್ತೋಲೆಯ ಮೂಲಕ ಜಯಂತಿ ಆಚರಣೆಯ ಕುರಿತು ತಿಳಿಸಿ ಭಾಗವಹಿಸುವಂತೆ ಕೋರಲು ತಿಳಿಸಿದರು. ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ತಲಾ ಮೂವರು ಪ್ರತಿಭಾವಂತ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಸೂಚಿಸಿದರು.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಜಯಂತಿಯಲ್ಲಿ ಭಾಗವಹಿಸಬೇಕು. ಮಹರ್ಷಿಗಳ ಕುರಿತು ಉಪನ್ಯಾಸ ನೀಡಲು ಉಪನ್ಯಾಸಕರನ್ನು ಆಹ್ವಾನಿಸುವ ಕಾರ್ಯವಾಗಬೇಕು. ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಹಾಗೂ ಮಾರ್ಗದರ್ಶನ ನೀಡಿದ ಸಮುದಾಯದ ಹಿರಿಯರನ್ನು ಗೌರವಿಸುವ ಕಾರ್ಯವಾಗಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಮುದಾಯದ ಸಂಘಟಣೆ, ಸಂಸ್ಥೆಗಳು ಭಾಗವಹಿಸಲು ತಿಳಿಸಬೇಕು. ಊಟೋಪಚಾರದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸುವ್ಯವಸ್ಥಿತವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಜಯಂತಿಯ ಕುರಿತಾಗಿ ರೂಪರೇಷೆಗಳನ್ನು ಸಿದ್ದಪಡಿಸಲು, ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಯುವಂತಾಗಲು ಸೂಕ್ತ ಕ್ರಮ ವಹಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ನಗರಸಭೆ ಪೌರಾಯುಕ್ತ ಆರ್.ಪಿ. ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರ ನಾಯ್ಕ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿ ಪ್ರತೀಕ್ ಶೆಟ್ಟಿ, ನಗರಸಭೆ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಪರಿಶಿಷ್ಟ ವರ್ಗಗಳ ಸಂಘಟಣೆಗಳ ಮುಖಂಡರು ಇದ್ದರು.

300x250 AD
Share This
300x250 AD
300x250 AD
300x250 AD
Back to top