ಕಾರವಾರ: 2019ರ ಪ್ರವಾಹದಿಂದಾಗಿ ತಾಲೂಕಿನ ಕದ್ರಾ, ಮಲ್ಲಾಪುರ ಪಂಚಾಯತಿ ವ್ಯಾಪ್ತಿಯ ಸರಕಾರಿ ಜಾಗೆಯಲ್ಲಿ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದ 30ಕ್ಕೂ ಹೆಚ್ಚಿನ ಕುಟುಂಬಗಳು ನಿರಾಶ್ರಿತರಾಗಿದ್ದವು. ಹೀಗಾಗಿ ಈ ಕುಟುಂಬಗಳಿಗೆ ಕೆಪಿಸಿ ಅವರಣದಲ್ಲಿರುವ ಖಾಲಿ ಜಾಗದಲ್ಲಿಯೇ ಸರಕಾರ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಮಾಜಿ ಶಾಸಕ ಸತೀಶ ಸೈಲ್ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಕದ್ರಾ ಕೆಪಿಸಿ ಡ್ಯಾಂನಿAದ ಹೊರ ಬಿಟ್ಟ ಅಪಾರ ಪ್ರಮಾಣದ ನೀರಿನ ಕಾರಣದಿಂದ ಕಾಳಿ ನದಿಯಲ್ಲಿ ಬ್ರಹತ್ ಪ್ರಮಾಣದ ಪ್ರವಾಹ ಉಂಟಾಗಿ, ನೂರಾರು ಕುಟುಂಬಗಳು ಅತಂತ್ರವಾಗಿದ್ದವು. ಆ ಸಂದರ್ಭದಲ್ಲಿ ಸರಕಾರ ಎಲ್ಲರಿಗೂ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿತ್ತು. ಸರಕಾರದ ಭರವಸೆಯಂತೆ ಸ್ವಂತ ಜಮೀನಿನಲ್ಲಿ ವಾಸ ಮಾಡುತ್ತಿದ್ದ ನೆರೆ ಸಂತ್ರಸ್ತರು, ಸರಕಾರದಿಂದ ಅನುದಾನ ಪಡೆದು ತಮ್ಮ ಸ್ವಂತ ಜಾಗೆಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಆದರೆ ಆರಣ್ಯ ಜಾಗದಲ್ಲಿ ದಶಕಗಳಿಂದ ಮನೆ ಕಟ್ಟಿಕೊಂಡು ಕೆಪಿಸಿ ಮತ್ತು ಎನ್‌ಪಿಸಿಐಎಲ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದ ಬಡವರಲ್ಲಿ ಬಡವರಾಗಿರುವ ಸುಮಾರು 30 ನೆರೆ ಸಂತ್ರಸ್ತರಿಗೆ ಇದುವರೆಗೂ ಯಾವುದೇ ಪುನರ್ವಸತಿ ಅಥವಾ ಸರಕಾರದ ಪರಿಹಾರ ನೀಡಿಲ್ಲ. ಹೀಗಾಗಿ ಕೆಪಿಸಿ ಕ್ವಾಟ್ರಸ್‌ನಲ್ಲಿ ಅಧಿಕಾರಿಗಳು ಯಾವತ್ತು ತಮ್ಮನ್ನು ಹೊರದಬ್ಬುವರೋ ಎಂಬ ಆತಂಕದಲ್ಲೇ ಜೀವನ ಕಳೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
2021ರ ಕಾಳಿ ನದಿ ಪ್ರವಾಹ ಸಂತ್ರಸ್ತರ ಪೈಕಿ ಅರಣ್ಯ ಪ್ರದೇಶದಲ್ಲಿ ಅತಿಕ್ರಮಣ ಮಾಡಿ ವಾಸಿಸುತ್ತಿದ್ದ ಸಂತ್ರಸ್ತರರಿಗೂ ಸರಕಾರ ಯೋಗ್ಯ ಪರಿಹಾರ ನೀಡಿತ್ತು ಮತ್ತು ಸಂಬAಧಪಟ್ಟ ಸಂತ್ರಸ್ತರು ಸರಕಾರದಿಂದ ಅನುದಾನ ಪಡೆದು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ 2019ರ ಕಾಳಿನದಿ ತೀರದ ಸರಕಾರಿ ಜಾಗೆ ಅತಿಕ್ರಮಣದಾರರಿಗೆ ಯಾವುದೇ ರೀತಿಯ ಪರಿಹಾರ ಅಥವಾ ಶಾಶ್ವತ ಪುನರ್ವಸತಿ ಕಲ್ಪಿಸದಿರುವುದು ಸಂತ್ರಸ್ತರಿಗೆ ಮಾಡಿದ ಪಕ್ಷಪಾತ ಧೋರಣೆಯಾಗಿದೆ ಎಂದಿರುವ ಸೈಲ್, ಕೆಪಿಸಿ ಅಧೀನದಲ್ಲಿ ಖಾಲಿ ಇರುವ 22 ಎಕರೆ ಜಾಗೆ ಪೈಕಿ ಸ್ವಲ್ಪ ಜಮೀನು ಪ್ರದೇಶದಲ್ಲಿ ಕೆಪಿಸಿ ಕ್ವಾಟ್ರರ್ಸ್ನಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿರುವ, ಕದ್ರಾ ಮತ್ತು ಮಲ್ಲಾಪುರ ಪಂಚಾಯತಿನ 2019ರ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಟ್ಟು ಶಾಶ್ವತ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.