ಕುಮಟಾ: ಪಟ್ಟಣದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪಟ್ಟಣದ ಸ್ವಚ್ಚತೆಯಲ್ಲಿ ಪೌರಕಾರ್ಮಿಕರ ಪಾತ್ರ ಬಹಳ ಮಹತ್ವದ್ದು. ಅವರು ಪ್ರತಿನಿತ್ಯ ಬೆಳಗ್ಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವುದರಿಂದ ನಾವೆಲ್ಲ ಆರೋಗ್ಯವಂತರಾಗಿದ್ದೇವೆ ಎಂದು ಹೇಳಿದರು.
ಯಾವುದೇ ನಗರ ಅಥವಾ ಪಟ್ಟಣದ ಶುಚಿಯಾಗಿದ್ದರೆ ಮಾತ್ರ ಆ ಪಟ್ಟಣಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ. ಆರೋಗ್ಯವಂತ ನಗರ ಎನಿಸಿಕೊಳ್ಳಲು ಸಾಧ್ಯ. ಕುಮಟಾ ಪಟ್ಟಣ ಸ್ವಚ್ಛವಾಗಿದೆ. ಅಂಥ ಶ್ರಮಿಕರಾದ ಪೌರಕಾರ್ಮಿಕರನ್ನು ಸನ್ಮಾನಿಸುವ ಭಾಗ್ಯ ನನಗೆ ಲಭಿಸಿರುವುದು ನಿಜಕ್ಕೂ ಖುಷಿ ತಂದಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಅಜಯ ಭಂಡರ‍್ಕರ್ ಮಾತನಾಡಿ, ಸ್ವಚ್ಛತೆಯಲ್ಲಿ ಕುಮಟಾ ಪುರಸಭೆಗೆ ನಮ್ಮ ಪೌರ ಕಾರ್ಮಿಕರಿಂದಲೇ ಉತ್ತಮ ಹೆಸರು ಬಂದಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಕೂಡ ಕಳೆದ ವರ್ಷ ಲಭಿಸಿದೆ. ಸ್ವಚ್ಛ ಕುಮಟಾ ಎಂಬ ಬಿರುದು ಕೂಡ ನಮ್ಮ ಪಟ್ಟಣಕಿದೆ. ಅದಕ್ಕೆ ಮುಖ್ಯ ಕಾರಣ ನಮ್ಮ ಪೌರ ಕಾರ್ಮಿಕರು. ಅವರಿಗೆ ಇಂದು ಸನ್ಮಾನಿಸುವ ಮೂಲಕ ಗೌರವ ಸಲ್ಲಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಸುಮತಿ ಭಟ್, ಚೇರಮೆನ್ ಶುಶೀಲಾ ಗೋವಿಂದ ನಾಯ್ಕ, ಸದಸ್ಯರಾದ ಪಲ್ಲವಿ ಮಡಿವಾಳ, ಗೀತಾ ಮುಕ್ರಿ, ಶೈಲಾ ಗೌಡ, ಕಿರಣ ಅಂಬಿಗ, ಸತೀಶ ಭಂಡಾರಿ, ಮ್ಯಾನೇಜರ್ ಅನೀತಾ ಶೆಟ್ಟಿ, ಸಮುದಾಯ ಸಂಘಟಕಿ ಮೀನಾಕ್ಷಿ ಆಚಾರಿ, ಸಿಬ್ಬಂದಿಯಾದ ಶ್ರೀಧರ ಗೌಡ, ಇತರರು ಉಪಸ್ಥಿತರಿದ್ದರು.