ಯಲ್ಲಾಪುರ: ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ ಜಾರಿಯಾಗುವುದು ನಿಶ್ಚಿತ ಎನ್ನುವ ಸಂದರ್ಭದಲ್ಲಿ ಯೋಜನೆಯನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿರುವ ಕೆಲವರು ಯೋಜನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿ ಗೊಂದಲ ಸೃಷ್ಠಿಸುತ್ತಿದ್ದಾರೆಂದು ಹಕ್ಕೊತ್ತಾಯ ಸಮಿತಿ ಪ್ರಮುಖ ರಾಮು ನಾಯ್ಕ ಆರೋಪಿಸಿದ್ದಾರೆ.
ಅವರು ಶನಿವಾರ ಯೋಜನೆಯ ಹೋರಾಟ ಸಮಿತಿಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡುತ್ತಿದ್ದರು. ಈಗ ವಿರೋಧಿಸುತ್ತಿರುವವರು ಅಭಿವೃದ್ಧಿಯ ವಿರೋಧಿಗಳು.ಸ್ವ ಹಿತಾಸಕ್ತಿಗಾಗಿ ವಿರೋಧಿಸುತ್ತಿದ್ದಾರೆ.ನೇರವಾಗಿ ಸಮಾಜದೆದರು ಬರದೇ ತೆರೆಯ ಮರೆಯಲಿ ಗೊಂದಲ ಸೃಷ್ಠಿಸುತ್ತಿದ್ದಾರೆ.
ಈಗಾಗಲೇ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ತಾಲೂಕಿನಿಂದ ನೂರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿ ಯೋಜನೆಯ ಜಾರಿಗೆ ಹಕ್ಕೊತ್ತಾಯ ಮಂಡಿಸಿದ್ದಾರೆ.
ಕೇಂದ್ರದ ಮಾರ್ಗಪರಿಶೀಲನಾ ಸಮಿತಿ ಸೆ.26 ರಿಂದ 28 ರವರೆಗೆ ಜಿಲ್ಲೆಯಲ್ಲಿ ಓಡಾಡಲಿದೆ. ಸೆ.27 ರಂದು ಅಂಕೋಲಾ ಮತ್ತು ಯಲ್ಲಾಪುರ ಭಾಗದಲ್ಲಿ ಮಾರ್ಗಪರಿಶೀಲನೆ ನಡೆಸಲಿದೆ.ಸೆ.28 ರಂದು ಕಾರವಾರ ಡಿ.ಸಿ.ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ಇದಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಾರ್ವಜನಿಕರು ಭಾಗವಹಿಸಿ ಯೋಜನೆಯ ಬಗ್ಗೆ ಸಕಾರಾತ್ಮಕವಾಗಿ ಮನವರಿಕೆ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು.
ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಮಾತನಾಡಿ,”ಯೋಜನೆ ಜಾರಿಯಾದಲ್ಲಿ ಸ್ಥಳಿಯವಾಗಿ ಉದ್ಯೋಗವಕಾಶ,ಪರಿಸರ ಪ್ರವಾಸೋದ್ಯಮಕ್ಕೆ ಪೂರಕ ಆಗಲಿದೆ.ಸರಕು ಸಾಗಣಿಕೆಗೂ ಅನುಕೂಕತೆ ಆಗಲಿದೆ” ಎಂದರು.
ಸಮೀತಿಯ ಪ್ರಮುಖರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ವೇಣುಗೋಪಾಲ ಮದ್ಗುಣಿ,ಡಿ.ಜಿ.ಹೆಗಡೆ,ಎಂ.ಡಿ.ಮುಲ್ಲಾ,ಮಾಲತೇಶ ಗೌಳಿ,ಮಾಧವ ನಾಯ್ಕ,ಜಗನಾಥ ರೇವಣಕರ್,ವಿನೋದ ತಳೆಕರ್ ಮುಂತಾದವರು ಇದ್ದರು.