ಜೊಯಿಡಾ: ಹೊಸ ಕಲ್ಲುಕ್ವಾರಿಗಳನ್ನ ನಡೆಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ತಾಲೂಕಿನ ರಾಮನಗರದ ಅಡಾಳಿಯಲ್ಲಿ ಹಮ್ಮಿಕೊಂಡಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ರಾಮನಗರ ಸಾರ್ವಜನಿಕರಿಂದ ಪರ ಮತ್ತು ವಿರೋಧದ ಅಭಿಪ್ರಾಯ ವ್ಯಕ್ತವಾಯಿತು. ಕೆಲವರು ರಾಮನಗರದಲ್ಲಿ ಕಲ್ಲು ಕ್ವಾರಿ ಆಗಬೇಕು, ಕಲ್ಲು ಕ್ವಾರಿಯಿಂದ ನೂರಾರು ಕುಟುಂಬಗಳಿಗೆ ಕೆಲಸ ಸಿಗುತ್ತದೆ. ಇಲ್ಲಿಯ ಲಾರಿ ಮಾಲಿಕರಿಗೆ ಕೆಲಸ ಸಿಗುತ್ತದೆ. ಮನೆ ಕಟ್ಟಲು ಕಲ್ಲು, ಕಲ್ಲಿನ ಪುಡಿಗಳು ಇಲ್ಲೆ ಲಭ್ಯವಾಗುತ್ತದೆ. ರಾಮನಗರದಲ್ಲಿ ಯಾವುದೇ ಕಾರ್ಖಾನೆಗಳು ಇಲ್ಲ. ಹೀಗಾಗಿ ಇಲ್ಲಿನ ಜನರು ಬೇರೆ ರಾಜ್ಯಗಳಿಗೆ ಕೆಲಸಕ್ಕೆ ವಲಸೆ ಹೋಗುತ್ತಿದ್ದಾರೆ. ಹೊಸ ಕಲ್ಲು ಕ್ವಾರಿ ಶುರುವಾದರೆ ಬಹಳಷ್ಟು ಜನರಿಗೆ ಉದ್ಯೋಗ ಸಿಗುತ್ತದೆ. ಬಡ ಜನರಿಗೆ ಸಹಾಯವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಇನ್ನೂ ಕೆಲವರು ಇಲ್ಲಿ ಹೊಸ ಕಲ್ಲು ಕ್ವಾರಿ ಮಾಡುವುದು ಬೇಡ. ಕ್ವಾರಿ ನಡೆಸಬೇಕೆಂದಿರುವ ಜಾಗದ ಸಮೀಪದ ಮನೆಗಳು ಬಿರುಕು ಬಿಟ್ಟಿವೆ. ಈಗ ಇದ್ದ ಕ್ವಾರಿಗಳು ಇರಲಿ, ಹೊಸ ಕ್ವಾರಿ ಬೇಡ ಎಂದು ಇನ್ನು ಕೆಲವರು ವಾದಿಸಿದರು. ಸಭೆಯಲ್ಲಿ ಒಟ್ಟಾರೆಯಾಗಿ ಕಲ್ಲು ಕ್ವಾರಿ ನಡೆಸಬೇಕೆಂದಲೇ ಹೆಚ್ಚಿನ ಜನ ವಾದಿಸಿರುವುದು ಕಂಡುಬಂತು. ಅಲ್ಲದೇ ನಿಮಯಮದಂತೆ ಬ್ಲಾಸ್ಟಿಂಗ್ ಮಾಡಿದಲ್ಲಿ ಯಾವುದೇ ತೊಂದರೆ ಇಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಎಲ್ಲಾ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದ್ದೇವೆ. ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಈ ಬಗ್ಗೆ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು. ಇದೇ ವೇಳೆ, ರಾಮನಗರ- ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಗಿತಗೊಂಡಿರುವ ಕೆಲಸ ಪ್ರಾರಂಭಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ, ಪರಿಸರ ಇಲಾಖೆಯ ವಿಜಯಾ ಹೆಗಡೆ, ಗಣಪತಿ ಹೆಗಡೆ, ಪ್ರಭಾರಿ ತಹಶೀಲ್ದಾರ ಶೈಲೇಶ ಪರಮಾನಂದ, ಕ್ವಾರಿ ಮಾಲಿಕರಾದ ಮಹದೇವ ಗಾಂದಲೆ, ಮಹೇಶ ಕೋರಡಕರ ಹಾಗೂ ಇತರ ಇಲಾಖೆ ಅಧಿಕಾರಿಗಳು ಇದ್ದರು.