ಕಾರವಾರ: ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಅರುಣ್ ಗೌಡ ಮಳಲಿ ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ. ಇದೇ ವೇಳೆ ಜಿಲ್ಲೆಗೆ ಆಹ್ವಾನಿಸಿದ್ದು, ಸದ್ಯದಲ್ಲಿಯೇ ಆಗಮಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅರುಣ್ ಗೌಡ, ಬೆಂಗಳೂರಿನ ನಿಖಿಲ್ ಕುಮಾರಸ್ವಾಮಿ ಅವರ ನಿವಾಸದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷತೆ ವಹಿಸಿಕೊಂಡ ಬಳಿಕ ಮೊದಲ ಬಾರಿ ಭೇಟಿ ಮಾಡಿ ಜಿಲ್ಲೆಯಲ್ಲಿ ಜೆಡಿಎಸ್ನಿಂದ ಕೈಗೊಳ್ಳಲಾಗುವ ಕಾರ್ಯಕ್ರಮ ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ ಅನೇಕ ಪ್ರಾಮಾಣಿಕ ಕಾರ್ಯಕರ್ತರು ಇದ್ದು, ಜೆಡಿಎಸ್ ಪಕ್ಷ ಸದೃಢವಾಗಿದೆ. ನೀವು ಒಮ್ಮೆ ಆಗಮಿಸುವಂತೆಯೂ ಆಹ್ವಾನ ನೀಡಲಾಯಿತು. ಅಲ್ಲದೆ ಜಿಲ್ಲೆಯಲ್ಲಿ ಜೆಡಿಎಸ್ ಬಲವರ್ಧನೆಗೆ ಓರ್ವರು ಜೆಡಿಎಸ್ ಶಾಸಕರನ್ನು ಉಸ್ತುವಾರಿಯಾಗಿ ನೇಮಕ ಮಾಡುವಂತೆಯೂ ಕೋರಲಾಗಿದೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸದ್ಯದಲ್ಲಿಯೇ ಆಗಮಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.