ಕುಮಟಾ: ಎಂಡೋಸಲ್ಫಾನ್ ಪೀಡಿತ ಮೀನುಗಾರ ಯುವಕನೋರ್ವನಿಗೆ ಪಿಂಚಣಿ ಸೌಲಭ್ಯವನ್ನು ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಆರ್.ಎಚ್.ನಾಯ್ಕ ಅವರು ಒದಗಿಸಿಕೊಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ತಾಲೂಕಿನ ಅಘನಾಶಿನಿಯ ಕೆಳಗಿನಕೇರಿ ನಿವಾಸಿ ಮಂಜುನಾಥ ಶಿವಾನಂದ ಹರಿಕಾಂತ ಎಂಬ ಯುವಕ 2016ರಲ್ಲಿ ಮೀನುಗಾರಿಕೆಗೆ ತೆರಳಿದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಆತನಿಗೆ ಎಂಡೋಸಲ್ಫಾನ್ ಪೀಡಿತನಾಗಿರುವುದು ದೃಢಪಟ್ಟಿದೆ. ಯುವಕನ ತಂದೆ ಶಿವಾನಂದ ಹರಿಕಾಂತ ಅವರು ಸಾಕಷ್ಟು ಹಣ ಖರ್ಚು ಮಾಡಿ, ಆತನಿಗೆ ಉತ್ತಮ ಚಿಕಿತ್ಸೆ ಕೊಡಿಸುವ ಮೂಲಕ ಮಗನನ್ನು ಆರೈಕೆ ಮಾಡುತ್ತಿದ್ದಾರೆ. ಎಂಡೋಸಲ್ಫಾನ್ ಪೀಡಿತರಿಗೆ ಸರ್ಕಾರ ಪಿಂಚಣೆ ನೀಡುತ್ತಿದ್ದು, ಈ ಸೌಲಭ್ಯವನ್ನು ತನ್ನ ಮಗನಿಗೂ ದೊರಕಿಸಿಕೊಡುವಂತೆ ಕಾಂಗ್ರೆಸ್ ಮುಖಂಡ ಆರ್ ಎಚ್ ನಾಯ್ಕ ಅವರ ಬಳಿ ಕೋರಿಕೊಂಡಿದ್ದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಆರ್.ಎಚ್.ನಾಯ್ಕ, ಪಿಂಚಣಿಗೆ ಅಗತ್ಯವಾದ ದಾಖಲಾತಿಗಳನ್ನು ಕ್ರೂಢೀಕರಿಸುವಾಗ ಕೆಲ ದಾಖಲೆಗಳಲ್ಲಿ ಸಮಸ್ಯೆ ಎದುರಾಗಿದೆ. ಹಾಗಾಗಿ ಆರೋಗ್ಯ ಇಲಾಖೆ ಮತ್ತು ತಹಸೀಲ್ದಾರ್ ವಿವೇಕ ಶೇಣ್ವಿ ಸೇರಿದಂತೆ ಕಂದಾಯ ಅಧಿಕಾರಿಗಳ ಸಹಾಯ ಪಡೆದು, ಎಂಡೋಸಲ್ಫಾನ್ ಪೀಡಿತ ಯುವಕನ ಎಲ್ಲ ದಾಖಲಾತಿಗಳನ್ನು ಸರಿಪಡಿಸಿ, ಆತನಿಗೆ ಪಿಂಚಣಿ ದೊರೆಯುವಂತೆ ಮಾಡಿದ್ದಾರೆ. ತಹಸೀಲ್ದಾರ್ ಶೇಣ್ವಿ ಅವರು ಎಂಡೋಸಲ್ಫಾನ್ ಪೀಡಿತರಿಗೆ ನೀಡುವ ಪಿಂಚಣಿಯ ಪ್ರಮಾಣ ಪತ್ರವನ್ನು ಮಂಜುನಾಥ ಅವರ ತಂದೆ ಶಿವಾನಂದ ಹರಿಕಾಂತ ಅವರಿಗೆ ಹಸ್ತಾಂತರಿಸಿದರು.
ಈ ಪಿಂಚಣಿ ಸೌಲಭ್ಯ ದೊರಕಿಸಿಕೊಡುವಲ್ಲಿ ಸಂಪೂರ್ಣ ಸಹಕಾರ ನೀಡಿದ ಕಾಂಗ್ರೆಸ್ ಮುಖಂಡ ಆರ್ ಎಚ್ ನಾಯ್ಕರಿಗೆ ಶಿವಾನಂದ ಹರಿಕಾಂತ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ಆರ್.ಎಚ್.ನಾಯ್ಕರ ಈ ಜನಪರ ಕಾರ್ಯ ಸಾರ್ವಜನಿಕರ ಪ್ರಶಂಸೆಗೂ ಪಾತ್ರವಾಗಿದೆ.