ಕುಮಟಾ: ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿ ಮಾಡದಿದ್ದರೆ ಹೋರಾಟ ಉಗ್ರಗೊಳಿಸುವ ಜತೆಗೆ ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುವ ಕಠಿಣ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಆರ್.ಜಿ.ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೇ ಸಾಕಷ್ಟು ಸಾವು-ನೋವು ಅನುಭವಿಸಿದ್ದೇವೆ. ಜನರ ಆರೋಗ್ಯ ಸುರಕ್ಷತೆಗಾಗಿ ಜಿಲ್ಲೆಯಲ್ಲೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುಬೇಕೆಂಬ ಬೇಡಿಕೆ ಹಲ ದಶಕಗಳಿಂದಲೂ ಕೇಳಿಬಂದಿದೆ. ಇತ್ತೀಚೆಗೆ ಕೆಲ ವರ್ಷಗಳಿಂದ ಆಸ್ಪತ್ರೆಗಾಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹೋರಾಟ ನಡೆಯುತ್ತಲೆ ಇದೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಆ ಬಗ್ಗೆ ತಾತ್ಸಾರ ಧೋರಣೆ ಇದೆ ಎಂಬುದು ಸದನದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರು ಜಿಲ್ಲೆಗೆ ಅಗತ್ಯವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಪ್ರಸ್ತಾಪಿಸಿದಾಗ, ಆರೋಗ್ಯ ಸಚಿವರಾದ ಡಾ.ಸುಧಾಕರ ಅವರು ಆಡಳಿತಾತ್ಮಕ ಅನುಮೋದನೆ ದೊರೆಯದೇ ಪ್ರಸ್ತಾವನೆ ತಿರಸ್ಕೃತಗೊಂಡಿದೆ ಎಂದಾಗ ರೂಪಾಲಿ ನಾಯ್ಕ ಅವರು ಆಕ್ರೋಶಗೊಂಡು, ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅನಿವಾರ್ಯತೆ ಬಗ್ಗೆ ಸಭಾಧ್ಯಕ್ಷರ ಗಮನ ಸೆಳೆದರು. ಆದರೆ ಜಿಲ್ಲೆಯ ಉಳಿದ ಶಾಸಕರು ಅವರಿಗೆ ಬೆಂಬಲಿಸದೇ ಇರುವುದು ನಮ್ಮ ಶಾಸಕರ ಬೇಜಬ್ದಾರಿ ನಡೆಯ ಬಗ್ಗೆ ಬೇಸರ ಮೂಡುವಂತಾಗಿದೆ. ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದೇ ಜಿಲ್ಲೆಯವರಾಗಿದ್ದು, ರೂಪಾಲಿ ಅವರ ಒತ್ತಾಸೆಯನ್ನು ಕೇಳುವ ತಾಳ್ಮೆ ಕೂಡ ಅವರಲ್ಲಿ ಇರಲಿಲ್ಲ. ರೂಪಾಲಿ ಅವರಿಗೆ ಸರಿಯಾಗಿ ಮಾತನಾಡಲು ಅವಕಾಶ ನೀಡದೇ ಇಡೀ ಜಿಲ್ಲೆಯ ಜನರಿಗೆ ಅಗೌರವ ಸೂಚಿಸಿದ್ದಾರೆ. ಹಾಗಾಗಿ ನಮ್ಮ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆ ಬೇಕು. ಅದಕ್ಕಾಗಿ ನಮ್ಮ ಹೋರಾಟವನ್ನು ಇನ್ನಷ್ಟು ಬಲಗೊಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯಮಿ ಹರೀಶ ಶೇಟ್ ಮತ್ತು ಗಜು ನಾಯ್ಕ ಅಳ್ವೆಕೋಡಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸೀಬರ್ಡ್, ಕೈಗಾ, ಜಲಾಶಯಗಳು ಸೇರಿದಂತೆ ಬೃಹತ್ ಯೋಜನೆಗಳಿವೆ. ಏನಾದರೂ ದುರಂತ ಸಂಭವಿಸಿದರೆ ತುರ್ತು ಚಿಕಿತ್ಸೆ ನೀಡಲು ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದು ದುರಂತ. ಓರ್ವ ಮಹಿಳೆಯಾಗಿ ಸದನದಲ್ಲಿ ಜಿಲ್ಲೆಯ ಪರವಾಗಿ ಧ್ವನಿ ಎತ್ತಿರುವುದು ಶಾಸಕಿ ರೂಪಾಲಿ ನಾಯ್ಕ. ಉಳಿದೆಲ್ಲ ಶಾಸಕರು, ಸಚಿವರು ಅವರಿಗೆ ಬೆಂಬಲ ನೀಡುವ ಬದಲೂ ಮೌನಕ್ಕೆ ಶರಣಾಗಿರುವುದನ್ನು ಗಮನಿಸಿದರೆ, ಅವರಿಗ್ಯಾರಿಗೂ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ ಎಂಬುದು ಜಿಲ್ಲೆಯ ಜನತೆಗೆ ಅರಿವಾಗುವಂತಾಗಿದೆ. ಚುನಾವಣೆ ಬರುತ್ತಿದ್ದಂತೆ ಎಂಎಲ್ಗಳು ಸಾವಿರ ಕೋಟಿ, ಒಂದುವರೆ ಸಾವಿರ ಕೋಟಿ ಅನುದಾನ ತಂದಿರುವ ಬಗ್ಗೆ ಜಾಹೀರಾತು ಕೊಡುತ್ತಿದ್ದಾರೆ. ನಾವು ಸಾವಿರ ಕೋಟಿ ಅನುದಾನದಲ್ಲಿ ಅವರಿಗೆ ಎಷ್ಟು ಕಮಿಷನ್ ಹೋಗಿದೆ. ಅವರು ಎಷ್ಟು ಶ್ರೀಮಂತರಾದರು ಎಂಬ ಲೆಕ್ಕ ಹಾಕುವಂತಾಗಿದೆ. ಮೂಲಭೂತ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರದ ಇಂಥ ಶಾಸಕರು ಜಿಲ್ಲೆಯಲ್ಲಿದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ನಾಯ್ಕ ಮಾಸ್ತಿಹಳ್ಳ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ ಸಮಿತಿಯ ಪ್ರಮುಖರಾದ ಸುಧಾಕರ ತಾರಿ, ಜ್ಞಾನೇಶ್ವರ ನಾಯ್ಕ, ಜಗದೀಶ ನಾಯ್ಕ, ಪ್ರಮೋದ ಬಾಡ, ವಿನಾಯಕ ಪಟಗಾರ, ಶ್ರೀಧರ, ನಾರಾಯಣ ಹರಿಕಂತ್ರ , ಉಮಾಕಾಂತ ಹರಿಕಂತ್ರ ಇತರರು ಇದ್ದರು.