ಕಾರವಾರ: ಕಲ್ಯಾಣ ಮಂಡಳಿ ಉಳಿಸಿ, ಕಾರ್ಮಿಕರ ರಕ್ಷಿಸಿ ಘೋಷಣೆಯಡಿ ಸೆ.21 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಾರ್ಮಿಕರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಪ್ರಾಂತ ಸಹಸಂಘಟನಾ ಕಾರ್ಯದರ್ಶಿ ಹರಿಶ್ಚಂದ್ರ ನಾಯ್ಕ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಮಂಡಳಿಯು ಕಳೆದ ಎರೆಡು ವರ್ಷಗಳಿಂದ ಬೇಡದಿರುವ ಯೋಜನೆಗಳಿಗೆ 2 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ. ಮಾಹಿತಿಯ ಪ್ರಕಾರ ಮಂಡಳಿಯಲ್ಲಿ 8500 ಕೋಟಿ ಹಣವಿದ್ದು, ಖರ್ಚು ಹೀಗೇ ಮುಂದುವರಿದರೆ ಮಂಡಳಿಯನ್ನೇ ಮುಚ್ಚುವ ಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕರ ಹಿತ ದೃಷ್ಟಿಗೆ ಮಂಡಳಿಯಿಂದ ಹೊರಡಿಸಿದ ಕೆಲವು ಜನಪ್ರಿಯ ಯೋಜನೆಗಳಲ್ಲಿ ಭ್ರಷ್ಟಾಚಾರವು ಇದೆ. ಅಲ್ಲದೇ ಈ ಹಿಂದೆ ಕಾರ್ಮಿಕ ಕಾರ್ಡ್ ಮಾಡಿಸಿ ಹಣ ಹಾಗೂ ಕಿಟ್ ವಿತರಣೆ ಮಾಡಲಾಗಿತ್ತು. ಅದರ ಫಲಾನುಭವಿಗಳಲ್ಲಿ ಶೇ 30ರಷ್ಟು ಕೂಡ ನೈಜ ಕಾರ್ಮಿಕರಿಲ್ಲ ಎನ್ನುವುದು ಬೇಸರದ ಸಂಗತಿ. ಇದರಿಂದ ಮಂಡಳಿಯ ಹಣ ಪೋಲಾಗುವುದಲ್ಲದೆ ನೈಜ ಕಾರ್ಮಿಕರಿಗೆ ವಂಚನೆಯಾಗುತ್ತಿದೆ ಎಂದ ಅವರು, ಕಾರ್ಮಿಕರ ಸೌಲಭ್ಯಗಳು ಫಲಾನುಭವಿಗಳನ್ನ ಬಹಳ ವಿಳಂಬವಾಗಿ ತಲುಪುತ್ತಿವೆ. ಹೀಗಾಗಿ ಈ ಯೋಜನೆಗಳನ್ನು ಸಕಾಲ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು.
ಭಾರತೀಯ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷ ಚಿಂತಾಮಣಿ ಕೊಡಳ್ಳಿ ಸೇರಿದಂತೆ ಪದಾಧಿಕಾರಿಗಳಾದ ನಾಗೇಶ್ ಎಲ್.ನಾಯ್ಕ್, ಉಮೇಶ್ ಎಂ.ನಾಯ್ಕ್ ಇದ್ದರು.