ಶಿರಸಿ : ತಾಲೂಕಿನ ಬನವಾಸಿ ಭಾಗದಲ್ಲಿ ಭಾರೀ ಪ್ರಮಾಣದ ಕೊಳೆ ರೋಗ ಬಂದ ಹಿನ್ನಲೆಯಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಬದನಗೋಡು ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬನವಾಸಿಯ ದಾಸನಕೊಪ್ಪದ ಕಾಳಂಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ ಕೋರಿಕೆಯ ಮೇರೆಗೆ ಅಡಿಕೆ ಹಾನಿಯನ್ನು ಶನಿವಾರ ಅಧಿಕಾರಿಗಳು ಪರಿಶೀಲಿಸಿದರು. ಬನವಾಸಿ ಭಾಗದಲ್ಲಿ ಶೆ.60 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಬನವಾಸಿ ಭಾಗದಲ್ಲಿ 2900 ಹೆಕ್ಟೇರ್ ಅಡಿಕೆ ಪ್ರದೇಶವಿದ್ದು, ಅದರಲ್ಲಿ 1800 ಹೆಕ್ಟೇರ್ ಗಿಂತ ಅಧಿಕ ಪ್ರದೇಶದಲ್ಲಿ ಶೇ.33 ಕ್ಕಿಂತ ಹೆಚ್ಚಿನ ಹಾನಿಯಾಗಿದೆ. ಅಡಿಕೆ ಕ್ವಿಂಟಾಲ್ ಗಟ್ಟಲೇ ಉದುರಿ ಬೀಳುತ್ತಿದ್ದು, ಟ್ರಾಕ್ಟರ್ ನಲ್ಲಿ ಕೊಳೆ ಅಡಿಕೆ ತುಂಬಿ ಮಾರಾಟ ಮಾಡುವ ಸ್ಥಿತಿ ಎದುರಾಗಿದೆ.
ಈ ಕುರಿತು ದ್ಯಾಮಣ್ಣ ದೊಡ್ಮನಿ ಮಾತನಾಡಿ, ಇಂದು ಕೈಗೆ ಬಂದ ತುತ್ತು ಬಾಯಿಗ ಬರದಂತಾಗಿದೆ. ಅಡಿಕೆ ಕೊಳೆಗೆ ಪರಿಹಾರ ಮೊತ್ತ ನೀಡಿದಾಗ ಮಾತ್ರ ಬದುಕಲು ಸಾಧ್ಯವಿದೆ. ಇದಲ್ಲದೇ ಭತ್ತ, ಜೋಳವೂ ಸಹ ಅತಿವೃಷ್ಟಿಯಿಂದ ಹಾನಿಗೀಡಾಗಿದೆ ಕಾರಣ ಸರ್ಕಾರ ರೈತರ ಸಂಕಷ್ಟಕ್ಕೆ ನಿಲ್ಲಬೇಕು ಎಂದು ಆಗ್ರಹಿಸಿದರು.
ಎಪಿಎಮ್ಸಿ ಅಧ್ಯಕ್ಷ ಪ್ರಶಾಂತ ಗೌಡ್ರು ಮಾತನಾಡಿ, ಪರಿಹಾರಕ್ಕಿಂತ ಪೂರ್ವ ಭಾಗದವರಿಗೆ ಬೆಳೆ ವಿಮೆ ಸರಿಯಾಗಿ ಬರಬೇಕಿದೆ. ಬನವಾಸಿ 10 ಪಂಚಾಯತಕ್ಕೆ ಅಲ್ಪ ಮೊತ್ತದ ವಿಮೆ ಬರುತ್ತಿದೆ. ಕಾರಣ ರೈತರು ತುಂಬಿದಷ್ಟು ಮೊತ್ತಕ್ಕೆ ಸರಿಯಾಗಿ ವಿಮೆ ಬರುವಂತೆ ಆಗಬೇಕು ಎಂದರು.
ಈ ವೇಳೆ ತೋಟಗಾರಿಕಾ ಇಲಾಖೆಯ ಸತೀಶ ಹೆಗಡೆ, ಗಜಾನನ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ರೈತರು ಇದ್ದರು.