ಸಿದ್ದಾಪುರ: ಕರಾಟೆ ಕಲಿಕೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಎಳೆತನದಿಂದಲೇ ಶಿಕ್ಷಣದೊಂದಿಗೆ ಕ್ರೀಡೆ, ಕಲೆ, ಸಾಹಿತ್ಯದಂತ ಉತ್ತಮ ಸಂಸ್ಕಾರ ಬೆಳೆಸಿದರೆ ಭವಿಷ್ಯದ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ. ಹೇಳಿದರು.
ಅವರು ಪಟ್ಟಣದ ಹೊಸೂರಲ್ಲಿ ಅಂತರರಾಷ್ಟ್ರೀಯ ಕರಾಟೆಪಟು ಆನಂದ ನಾಯ್ಕ ಸ್ಥಾಪಿಸಿದ ಚಾಂಪಿಯನ್ ಡೊಜೊ ಕರಾಟೆ ಕಲಿಕಾ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಪಾಲಕರು ಅಂಕಗಳ ಹಿಂದೆ ಓಡದೇ ಮಕ್ಕಳ ಆಸಕ್ತಿ, ಸೃಜನಶೀಲತೆ ಗುರುತಿಸಿ ಸೂಕ್ತ ಅವಕಾಶ ಕಲ್ಪಿಸಬೇಕು. ಈ ದಿಶೆಯಲ್ಲಿ ಕರಾಟೆ ಮಾಸ್ಟರ್ ಆನಂದ ನಾಯ್ಕ ಕೊಂಡ್ಲಿ ಕಿರಿವಯಸ್ಸಿನಲ್ಲೇ ಅದ್ಭುತ ಸಾಧನೆ ಮಾಡಿದ್ದಲ್ಲದೆ, ಎಳೆಯ ಮಕ್ಕಳಿಗೂ ಕರಾಟೆಯೊಂದಿಗೆ ಸ್ವಿಮಿಂಗ್, ಕ್ರೀಡೆ, ಕಲೆ, ಸಾಂಸ್ಕೃತಿಕ ವೇದಿಕೆ ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಿದ್ದಾಪುರ ಸರಕಾರಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಸ್ಫೂರ್ತಿ ರವಿರಾಜ ಮಾತನಾಡಿ, ಮಕ್ಕಳು ಆರೋಗ್ಯಕರವಾಗಿರಲು ಕರಾಟೆ, ಕ್ರೀಡೆ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಹಸಿವೆಯಾಗುತ್ತದೆ. ಸಹಜವಾಗಿ ಮಕ್ಕಳು ಹೊಟ್ಟೆತುಂಬಾ ಊಟ ಮಾಡುತ್ತಾರೆ. ಯಾವುದೇ ಆಸ್ಪತ್ರೆಗೆ ದಾಖಲಿಸಲಾಗುವ ಅವಶ್ಯಕತೆ ಬರುವುದಿಲ್ಲ. ಮಕ್ಕಳ ಆತ್ಮರಕ್ಷಣೆ, ಆರೋಗ್ಯ ವೃದ್ಧಿಗೆ ಕರಾಟೆ ಕಲಿಕೆ ಉತ್ತಮ ಮಾರ್ಗ ಎಂದರು.
ಶಿಕ್ಷಕ ಕೃಷ್ಣಮೂರ್ತಿ ಹೆಗಡೆ ಮಾತನಾಡಿ, ಆನಂದ ನಾಯ್ಕ ನನ್ನ ವಿದ್ಯಾರ್ಥಿಯಾಗಿದ್ದು, ಬಾಲ್ಯದಿಂದಲೂ ಸದಾ ಕ್ರೀಡೆ, ಸಾಹಸ ಪ್ರವೃತ್ತಿ ಹೊಂದಿ ಉತ್ತಮ ಸಂಸ್ಕಾರವAತನಾಗಿದ್ದನು. ಕರಾಟೆ ಶಾಲೆ ಉಜ್ವಲವಾಗಿ ಬೆಳೆಯಲಿ ಎಂದು ಹಾರೈಸಿದರು.
ಕರಾಟೆ ತರಬೇತಿ ಶಾಲೆ ಅಧ್ಯಕ್ಷ ಕೃಷ್ಣ ನಾಯ್ಕ ಕೊಂಡ್ಲಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಟ್ಟಡದ ಮಾಲಿಕ ಹರಿಹರ ಪೈ ಇದ್ದರು. ಅಜಿತ್ ಕೊಡಿಯಾ, ಜಯಂತ ನಾಯ್ಕ, ಪುನೀತ್ ನಾಯ್ಕ, ಸಿಂಧೂ, ಆಶಿತಾ, ಸೌಜನ್ಯ ಮತ್ತಿತರರು ಸಹಕರಿಸಿದರು. ಗಣಪತಿ, ವೀರಾಂಜನೇಯರ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಿಂಧೂ ಸಂಗಡಿಗರು ಪ್ರಾರ್ಥನೆ ಹಾಡಿದರು. ಕರಾಟೆ ಶಾಲೆ ಸ್ಥಾಪಕ ಆನಂದ ನಾಯ್ಕ ಸ್ವಾಗತಿಸಿದರು. ಸಿಆರ್‌ಪಿ ಗಣೇಶ ಕೊಡಿಯಾ ಕಾರ್ಯಕ್ರಮ ನಿರೂಪಿಸಿದರು. ಅಜಿತ್ ಕೊಡಿಯಾ ವಂದಿಸಿದರು.