ಶಿರಸಿ: ನಗರದ ಲಯನ್ಸ್ ಶಾಲೆಯ ಸ್ಟೂಡೆಂಟ್ ಕ್ಲಬ್ ಅಡಿಯಲ್ಲಿ ಲಯನ್ಸ ಸಭಾಭವನದಲ್ಲಿ ನಡೆದ “ವೈದ್ಯರಾಗುವುದು ಹೇಗೆ” ಎಂಬ ವಿಶೇಷ ಕಾರ್ಯಕ್ರಮದಡಿಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿನಿ ಡಾ. ಶೃತಿ ಹೆಗಡೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವೈದ್ಯಕೀಯ ಲೋಕವನ್ನು ಪ್ರವೇಶಿಸುವುದಾದರೆ ಕಲಿಕೆಯ ಸಂದರ್ಭದಲ್ಲಿ ಸುದೀರ್ಘ ಅಧ್ಯಯನ ಮತ್ತು ತಾಳ್ಮೆ, ಶ್ರದ್ಧೆ ಇವುಗಳಿರಲೇ ಬೇಕು.ಅಂದಾಗ ಮಾತ್ರ ವೈದ್ಯಕೀಯ ವೃತ್ತಿಯಲ್ಲಿ ಮುನ್ನಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಲ್ಲಿ ಬಲು ಸರಳವಾಗಿ, ಸುಂದರವಾಗಿ ಅರಿಕೆ ಮಾಡಿದರು.
ಸಂವಾದದ ಮೂಲಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಲಿಯುವ ಪೂರ್ವದಲ್ಲಿ ಬೇಕಾದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯ ಕುರಿತು, ಅಧ್ಯಯನ ಸಂದರ್ಭದಲ್ಲಿಯೂ, ವೈದ್ಯಕೀಯ ವೃತ್ತಿ ಜೀವನ ಆರಂಭಿಸಿದ ನಂತರವೂ ಇರಬೇಕಾದ ಮನಸ್ಥಿತಿಯ ಕುರಿತು ತಿಳಿಸಿಕೊಟ್ಟರು.
ಲಯನ್ಸ್ ಶಾಲೆಯಲ್ಲಿಯೇ ಕಲಿತು, ಮರಳಿ ತಮ್ಮ ಶಾಲೆಯ ಇಂದಿನ ಕಿರಿಯ ವಿದ್ಯಾರ್ಥಿಗಳ ಜೊತೆಯಲ್ಲಿ ಕಲೆತು ಮಾತನಾಡುತ್ತಿರುವುದು ಅತ್ಯಂತ ಹೆಮ್ಮೆಯ ಹಾಗೂ ಸಂತಸದ ಕ್ಷಣವೆಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಶಾಲೆ ಮುಖಾಧ್ಯಾಪಕ ಶಶಾಂಕ್ ಹೆಗಡೆಯವರು ಡಾಕ್ಟರ್ ಶೃತಿ ಇವರನ್ನು ಮಕ್ಕಳಿಗೆ ಪರಿಚಯಿಸಿ ಸ್ವಾಗತಿಸಿದರು. ಕುಮಾರಿ ನೀತಿ ಅಂಕೋಲೆಕರ್ ವಂದಿಸಿದರು. ಕುಮಾರಿ ಪ್ರಾರ್ಥನಾ ಪ್ರಸನ್ನ ಹೆಗಡೆ, ಕುಮಾರಿ ಸಾಚಿ ಲೋಖಂಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.