ಕಾರವಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಗರಮಾಲಾ ಯೋಜನೆಯಡಿ ನಿರ್ಮಾಣ ಮಾಡಲು ನಿರ್ಧರಿಸಿದ ಮಾಜಾಳಿ ಬಂದರು ಯೋಜನೆಗೆ ಮೀನುಗಾರರ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ತಾಲೂಕಿನ ಮಾಜಾಳಿಯ ದಂಡೇಬಾಗ್ನಲ್ಲಿ ಸೇರಿದ ಮೀನುಗಾರ ಮುಖಂಡರು ಹಾಗೂ ಊರ್ ನಾಗರಿಕರು, ಮಾಜಾಳಿಯಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದ ಮೀನುಗಾರಿಕಾ ಬಂದರು ಯೋಜನೆ ಬಗ್ಗೆ ಚರ್ಚಿಸಿದರು. ಬಂದರು ನಿರ್ಮಾಣದಿಂದ ಮೀನುಗಾರರಿಗೆ ಆಗುವ ತೊಂದರೆಗಳ ಬಗ್ಗೆ ವಿವರಿಸಿದರು. ಅಧಿಕಾರಿಗಳು ಮೀನುಗಾರರ ಜೊತೆ ಚರ್ಚಿಸದೇ, ಸರ್ಕಾರ ಏಕಾಏಕಿ ಈ ಯೋಜನೆಗೆ ಮುಂದಾಗಿರುವುದು ಈ ಭಾಗದ ಜನರಿಗೆ ನೋವುಂಟು ಮಾಡಿದೆ. ಅದಕ್ಕೆ ಮಾಜಾಳಿ, ಹಿಪ್ಪಳಿ, ದಂಡೇಬಾಗ್, ಬಾವಲ್, ದೇವಬಾಗ್ ಭಾಗದ ಮೀನುಗಾರರು ಸೇರಿ ಯೋಜನೆಗೆ ಇರುವ ವಿರೋಧದ ಬಗ್ಗೆ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಹಾಗೂ ಮೀನುಗಾರಿಕಾ ಸಚಿವರಿಗೆ ಮನವಿ ಸಲ್ಲಿಸುವ ಬಗ್ಗೆ ನಿರ್ಣಯ ಕೈಗೊಂಡರು.
ಮನವಿಗೆ ಸ್ಪಂದಿಸಿ ಯೋಜನೆ ಕೈ ಬಿಡದೆ ಹೋದರೆ ಮುಂದಿನ ದಿನ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಸೇರಿ ಉಗ್ರ ಹೋರಾಟ ಮಾಡಲಾಗುವುದು ಮತ್ತು ದೇವಬಾಗ್ದಿಂದ ಮಾಜಾಳಿಯವರೆಗೆ ಮುಂಬರುವ ಯಾವುದೇ ಚುನಾವಣೆಯನ್ನು ಬಹಿಷ್ಕರಿಸುವ ಮತ್ತು ಊರಿಗೆ ಬರುವ ಯಾವುದೇ ಅಧಿಕಾರಿಗಳಿಗೆ ಘೇರಾವ್ ಹಾಕುವುದಾಗಿ ನಿರ್ಣಯ ಮಾಡಿದರು.
ಸಭೆಯಲ್ಲಿ ಮೀನುಗಾರ ಮುಖಂಡರಾದ ದೇವರಾಯ್ ಸೈಲ್, ಮಹದೇವ್ ಕುಮಟೇಕರ, ಶ್ರೀಪಾದ್ ಸೈಲ್, ಮನೋಜ್ ಮಾಜಾಳಿಕರ, ಗಣಪತಿ ಖೋಬ್ರೇಕರ, ಪ್ರಶಾಂತ ಸೈಲ್, ಪಾಂಡುರಂಗ ಖೋಬ್ರೇಕರ, ಗಜಾನನ ಚಂಡೇಕರ, ಶೈಲೇಶ್ ಕಾಂಬ್ಳೆ, ಸಂತೋಷ ಚಂಡೇಕರ ಮುಂತಾದವರು ಇದ್ದರು.