ಕಾರವಾರ: ಹೊನ್ನಾವರ ತಾಲ್ಲೂಕಿನ ಹಳದಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರ ಹಸ್ತಕ್ಷೇಪದಿಂದ ಕೇವಲ ಅವರ ಬೆಂಬಲಿಗರನ್ನ ಆಯ್ಕೆ ಮಾಡಿ, ಅರ್ಹರನ್ನ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಹಳದಿಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಅಜಿತ್ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 20 ಮನೆಗಳನ್ನ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮಂಜೂರಿಸಲಾಗಿದೆ. ಆದರೆ ಆಯ್ಕೆಯಾದ ಯಾವ ಮನೆಗಳೂ ಕೂಡ ಗ್ರಾಮ ಪಂಚಾಯತಿಯಿಂದ ಆಯ್ಕೆ ಮಾಡಿದ್ದಲ್ಲ. ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರನ್ನೂ ಕಡೆಗಣಿಸಿ, ತಾಲೂಕು ಪಂಚಾಯತಿಯಿಂದ ನೇರವಾಗಿ ಫಲಾನುಭವಿಗಳನ್ನ ಆಯ್ಕೆ ಮಾಡಲಾಗಿದೆ. ಅದರಲ್ಲೂ ಅರ್ಹರಲ್ಲದವರನ್ನ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಫಲಾನುಭವಿಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಬೆಂಬಲಿಗರೇ ಹೆಚ್ಚಿದ್ದು, ಗ್ರಾಮ ಪಂಚಾಯತಿಯ ಅಧಿಕಾರವನ್ನ ಕುಗ್ಗಿಸಲಾಗಿದೆ ಎಂದು ಅವರು ದೂರಿದ್ದಾರೆ.
ಈ ಬಗ್ಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಈ ಬಗ್ಗೆ ದೂರು ನೀಡಲಾಗಿದೆ. ಕಾನೂನು ಬಾಹಿರ ವಸತಿ ಹಂಚಿಕೆಯನ್ನು ರದ್ದು ಮಾಡಲು ಆಗ್ರಹಿಸಿದ್ದೇವೆ. ಹೀಗಾಗಿ ನ್ಯಾಯ ಸಿಗುವ ಭರವಸೆ ಇದೆ. ನ್ಯಾಯ ಸಿಗದಿದ್ದಲ್ಲಿ ಕೋರ್ಟ್ ಮೆಟ್ಟಿಲೇರಲೂ ಸಿದ್ಧರಿದ್ದೇವೆ. ಅಲ್ಲಿಂದ ನ್ಯಾಯ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ಸದಸ್ಯರಾದ ಗೋವಿಂದ ಜೋಶಿ, ಗಂಗೆ ಗೌಡ, ಮಂಗಲಾ ಮುಕ್ರಿ, ವರ್ಧಮಾನ ಜೈನ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.