ಕುಮಟಾ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ವಿಜ್ಞಾನ ಶಿಕ್ಷಕ ಮಹಾದೇವ ಬೊಮ್ಮು ಗೌಡರವರಿಗೆ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘ ಹಾಗೂ ಸೆಕೆಂಡರಿ ಹೈಸ್ಕೂಲಿನ ಶಿಕ್ಷಕ ವೃಂದದವರು, ವಿದ್ಯಾರ್ಥಿ ಸಂಘದವರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಡಾ.ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಾತ್ಮ ಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ಎನ್.ನಾಯಕ, ನಮ್ಮ ಹೈಸ್ಕೂಲಿನ ವಿಜ್ಞಾನ ಶಿಕ್ಷಕರಾದ ಮಹಾದೇವ ಬೊಮ್ಮು ಗೌಡರವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವುದು ನಮ್ಮ ಶಾಲೆಗೆ ಸಂಸ್ಥೆಗೆ ಅತ್ಯಂತ ಹೆಮ್ಮೆಯ ವಿಷಯ. ಅವರ ಸೇವೆಗೆ ಸಂದ ಗೌರವ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಮಹಾದೇವ ಗೌಡ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ. ಪ್ರಶಸ್ತಿ ಬರಲು ಕಾರಣೀಕರ್ತರಾದ ಶಾಲಾ ಆಡಳಿತ ಮಂಡಳಿಯವರಿಗೆ, ಶಾಲೆಯ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರಿಗೆ, ಸಿಬ್ಬಂದಿಗಳಿಗೆ, ಶಾಲೆಯ ವಿದ್ಯಾರ್ಥಿ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಹಿರೇಗುತ್ತಿ ಊರಿನ ನಾಗರಿಕರಿಗೆ, ಶಾಲೆಯ ಲ್ಯಾಬೋರೇಟರಿಗೆ ಸಹಾಯ ನೀಡಿದ ದಾನಿಗಳಿಗೆ, ಶಿಕ್ಷಣ ಅಧಿಕಾರಿಗಳಿಗೆ ಧನ್ಯವಾದ ಸಮರ್ಪಿಸಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮೋಹನ ಬಿ.ಕೆರೆಮನೆ, ನಿವೃತ್ತ ಮುಖ್ಯಶಿಕ್ಷಕ ನಾಗೇಶ ಟಿ.ನಾಯಕ, ಮುಖ್ಯಾಧ್ಯಾಪಕ ರೋಹಿದಾಸ ಎಸ್.ಗಾಂವಕರ ಮಾತನಾಡಿದರು. ಎನ್.ರಾಮು ಹಿರೇಗುತ್ತಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಕಾಂತ ನಾಯಕ, ಸದಸ್ಯರಾದ ನಾಗಪ್ಪ ಕೆರೆಮನೆ, ರಮಾನಂದ ಪಟಗಾರ ಶಿಕ್ಷಕರಾದ ಬಾಲಚಂದ್ರ ಹೆಗಡೇಕರ, ವಿಶ್ವನಾಥ ಬೇವಿನಕಟ್ಟಿ, ನಾಗರಾಜ ನಾಯಕ, ಜಾನಕಿ ಗೊಂಡ, ಬಾಲಚಂದ್ರ ಅಡಿಗೋಣ, ಇಂದಿರಾ ನಾಯಕ, ಶಿಲ್ಪಾ ನಾಯಕ, ಮದನ ನಾಯಕ, ಕವಿತಾ ಅಂಬಿಗ, ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಮುಖ್ಯಾಧ್ಯಾಪಕ ಸುಮನ್ ಫರ್ನಾಂಡೀಸ್, ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ವಿದ್ಯಾಧರ ನಾಯಕ, ಮಹಿಮಾ ಗೌಡ ಹಾಗೂ ಪಾರ್ವತಿ ಹಳ್ಳೇರ ಉಪಸ್ಥಿತರಿದ್ದರು.