ಕಾರವಾರ: ಸಾವರ್ಕರ್ ಬುಲ್ ಬುಲ್ ಪಕ್ಷಿಯ ಮೇಲೆ ಕುಳಿತು ಹಾರುತ್ತಿದ್ದರೆಂಬ ಅತಿರೇಖದ ವರ್ಣನೆಯ ಪಾಠವನ್ನು ಪಠ್ಯದಿಂದ ಕೈಬಿಡುವಂತೆ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಒತ್ತಾಯಿಸಿದೆ.
ಈ ಬಗ್ಗೆ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿರುವ ಎಸ್ಎಫ್ಐ ಕಾರ್ಯಕರ್ತರು, ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೂ ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಎಸ್ಎಫ್ಐ ಹಾಸ್ಟೆಲ್ ಘಟಕದ ನಾಯಕ ವೀರೇಶ ರಾಠೋಡ, ಪಾಠದಲ್ಲಿ ಸಾವರ್ಕರ್ ಬಗ್ಗೆ ಅತಿರೇಖವಾಗಿ ವರ್ಣಿಸಲಾಗಿದೆ. ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದ್ದು, ಬೆಳೆಯುವ ಮಕ್ಕಳ ತಲೆಯಲ್ಲಿ ಸುಳ್ಳು ಹಾಗೂ ಅವೈಜ್ಞಾನಿಕ ಮಾಹಿತಿಗಳನ್ನ ತುಂಬಿದಂತಾಗುತ್ತದೆ. ಹೀಗಾಗಿ ಕೂಡಲೇ ಈ ಪಾಠವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಶಾಲಾ- ಕಾಲೇಜುಗಳಲ್ಲಿ ಅರ್ಧಕ್ಕರ್ಧದಷ್ಟು ಶಿಕ್ಷಕರು, ಉಪನ್ಯಾಸಕರ ಕೊರತೆ ಇದೆ. ಶೀಘ್ರವೇ ಸರ್ಕಾರ ಇವುಗಳನ್ನ ಭರ್ತಿ ಮಾಡಬೇಕು. ಅದನ್ನ ಬಿಟ್ಟು ಶಿಕ್ಷಕರ ಕೊರತೆಯ ನೆಪದಲ್ಲಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಖಂಡನೀಯ. ಹಾಸ್ಟೆಲ್ ಗಾಗಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸಿಗುವಂತೆ ನೋಡಿಕೊಳ್ಳಬೇಕು. ಪಠ್ಯವನ್ನ ಕೇಸರೀಕರಣಗೊಳಿಸಲು ಮುಂದಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.