ಗೋಕರ್ಣ: ಭಾರತದ ಭವಿಷ್ಯದ ಶೈಕ್ಷಣಿಕ ಕೇಂದ್ರವಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಶ್ರೀರಾಮಚಂದ್ರಾಪುರ ಮಠ ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪರಂಪರಾ ಗುರುಕುಲ ಆರಂಭಿಸಲು ಹಾಗೂ ಸದ್ಯದಲ್ಲೇ ಪರಂಪರಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಯೋಜಿಸಲಾಗಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಪರಂಪರಾ ಗುರುಕುಲ ಸಣ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ್ದು, ಮುಂದಿನ ವರ್ಷದಿಂದ ಇದು ಬೃಹತ್ ಸ್ವರೂಪ ಪಡೆಯಲಿದೆ. ಆ ಬಳಿಕ ಇದೇ ಆಧಾರದಲ್ಲಿ ಪರಂಪರಾ ವಿಶ್ವವಿದ್ಯಾನಿಲಯ ಆರಂಭಿಸಲು ಅಗತ್ಯ ಚೌಕಟ್ಟು ಸಿದ್ಧಪಡಿಸಲಾಗಿದ್ದು, ಸರ್ಕಾರದ ಹಂತದಲ್ಲಿದೆ ಎಂದು ವಿವರಿಸಿದರು. ಈ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿರುವ ಗುರುಕುಲಗಳು ಕಳೆದ ಎರಡು ವರ್ಷದಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಾಡಿನ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣದ ಸಮನ್ವಯದೊಂದಿಗೆ ಗುರುಕುಲಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಪರAಪರಾ ಗುರುಕುಲದಲ್ಲಿ ವಿದ್ಯಾರ್ಥಿಗಳು ಆರು ವರ್ಷದಲ್ಲ 18 ಭಾರತೀಯ ವಿದ್ಯೆಗಳ ಪೂರ್ವಶಿಕ್ಷಣ ಪಡೆಯಲಿದ್ದು, ಪರಂಪರಾ ವಿವಿಯಲ್ಲಿ ಇವುಗಳ ಉನ್ನತ ಅಧ್ಯಯನಕ್ಕೆ ಅವಕಾಶ ಇರುತ್ತದೆ. ಇದರ ಪಠ್ಯಕ್ರಮ ಸೇರಿದಂತೆ ಸಮಗ್ರ ರೂಪರೇಷೆ ಅಭಿವೃದ್ಧಿಪಡಿಸಿ ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಮಹತ್ವಾಕಾಂಕ್ಷಿ ವಿಶ್ವವಿದ್ಯಾಪೀಠ 15 ವರ್ಷಗಳ ವಿಸ್ತೃತ ಯೋಜನೆಯಾಗಿದ್ದು, ಇದು ಪೂರ್ಣವಾಗಿ ಕಾರ್ಯಗತಗೊಂಡಾಗ ಭಾರತೀಯ ಪದ್ಧತಿಯ ಸಮಗ್ರ ಶಿಕ್ಷಣವನ್ನು 25 ಸಾವಿರ ವಿದ್ಯಾರ್ಥಿಗಳು ಕಲಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಈಗಾಗಲೇ 150 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.