ಕುಮಟಾ: ಪಟ್ಟಣದ ಗುಡಗಾರಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಮಂಗಳವಾರ ನಡೆದ ಸತ್ಯನಾರಾಯಣ ಪೂಜೆಯನ್ನು ಉದ್ಯಮಿ ನಿರಂಜನ್ ನಾಯ್ಕ ದಂಪತಿ ನೆರವೇರಿಸಿದರು.
ಪಟ್ಟಣದ ಗುಡಗಾರಗಲ್ಲಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು 46 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. 10 ದಿನಗಳ ಕಾಲ ಪೂಜಿಸಲಾಗುವ ಗಣಪನ ಸನ್ನಿಧಿಯಲ್ಲಿ ಪ್ರತಿನಿತ್ಯ ವಿಭಿನ್ನ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಂಗಳವಾರ ನಡೆದ ಸತ್ಯನಾರಾಯಣ ಪೂಜೆಯನ್ನು ಉದ್ಯಮಿ ನಿರಂಜನ್ ನಾಯ್ಕ ದಂಪತಿ ನೆರವೇರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಮಧ್ಯಾಹ್ನ ನಡೆದ ಮಹಾ ಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಿಸಲಾಯಿತು. ಪೂಜೆಯಲ್ಲಿ ಶಾಲೆಯ ನೂರಾರು ಮಕ್ಕಳು ಪಾಲ್ಗೊಂಡಿರುವುದು ಗಮನ ಸೆಳೆಯಿತು.
ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪ್ರಸಾದ ಭೋಜನ ಸವಿದರು. ಅನ್ನದಾನದ ವ್ಯವಸ್ಥೆಯನ್ನು ಟೀಮ್ ವಾರಿಯರಸ್ ತಂಡ ಅಚ್ಚುಕಟ್ಟಾಗಿ ನಿರ್ವಹಿಸಿತು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಂ ಟಿ ನಾಯ್ಕ, ಗುಡಗಾರಗಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉದಯ ಶೇಟ್, ಪ್ರಮುಖರಾದ ವೆಂಕಟರಮಣ ಶೇಟ್, ಮಂಜುನಾಥ ಎಸ್ ನಾಯ್ಕ, ಸತೀಶ ಭಂಡಾರಿ, ಶ್ರೀಧರ ಕುಮಟಾ, ಇತರರು ಉಪಸ್ಥಿತರಿದ್ದರು.