ಬೆಂಗಳೂರು: ಜೀವವೈವಿಧ್ಯ ಮಂಡಳಿಯ ವಿಶೇಷ ಸಭೆಯು ಸೆ. 07ರಂದು ಬೆಂಗಳೂರಿನಲ್ಲಿ ನಡೆಯಿತು. ಮಂಡಳಿಯ ನೂತನ ಅಧ್ಯಕ್ಷ ರವಿ ಕಾಳಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಅವರಿಗೆ ಸನ್ಮಾನ ಮಾಡಲಾಯಿತು. ನೂತನ ಅಧ್ಯಕ್ಷ ರವಿ ಕಾಳಪ್ಪರವರಿಗೆ ಸ್ವಾಗತ ನೀಡಲಾಯಿತು.
ಕಳೆದ 2 ವರ್ಷಗಳ ನಿರಂತರ ರಾಜ್ಯವ್ಯಾಪಿ ಚಟುವಟಿಕೆಗಳು ಅನನ್ಯ ಸಾಧನೆಗಳ ಬಗ್ಗೆ ಅನಂತ ಹೆಗಡೆ ಅಶಿಸರ ಉಲ್ಲೇಖ ಮಾಡಿದರು. ಮಂಡಳಿಯಿಂದ ಆಗಲೇ ಬೇಕಾದ ಕೆಲಸಗಳ ಬಗ್ಗೆ ಅರಣ್ಯ ಪರಿಸರ ಜೀವವೈವಿಧ್ಯ ಉನ್ನತ ಅಧಿಕಾರಿಗಳ ಹಾಗೂ ಸದಸ್ಯರ ಗಮನ ಸೆಳೆದರು.
ಜಿಲ್ಲಾ ಮಟ್ಟದಲ್ಲಿ ಜೀವವೈವಿಧ್ಯ ಪ್ರಶಸ್ತಿ ನೀಡಿಕೆ, 6,000 ಪಂಚಾಯತಗಳಲ್ಲಿ ಜೀವವೈವಿಧ್ಯ ಅಭಿಯಾನ, 15 ಸ್ಥಳಗಳನ್ನು ಪಾರಂಪರಿಕ ಜೀವವೈವಿಧ್ಯ ತಾಣ ಎಂದು ಘೋಷಣೆ, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಪ್ರಗತಿ ಪರೀಶೀಲನಾ ಸಭೆ, ಮಾದರಿ ಜೀವವೈವಿಧ್ಯ ಸಮಿತಿ ಯೋಜನೆ, ಮತ್ಸ್ಯಧಾಮಗಳ ಘೋಷಣೆ, ಪಾರಂಪರಿಕ ವೃಕ್ಷಗಳ ಘೋಷಣೆ, ಪಶ್ಚಿಮ ಘಟ್ಟದಲ್ಲಿ ಪರಿಸರ ವಿನಾಶ ಮಾಡುವ ಬೃಹತ ಯೋಜನೆಗಳಿಗೆ ಅನುಮತಿ ನೀಡಬೇಡಿ ಎಂದು ಸರ್ಕಾರಕ್ಕೆ ಶಿಫಾರಸು, ಹಸಿರು ಬಜೇಟ್ ಶಿಫಾರಸು, ಭೂಕುಸಿತ ಅಧ್ಯಯನ ವರದಿ ಶಿಫಾರಸು ಸೇರಿದಂತೆ ಮಂಡಳಿಯನ್ನು ಬಹು ಕ್ರಿಯಾಶೀಲ ಮಾಡಿರುವ ಕಾರ್ಯಕ್ರಮಗಳ ಬಗ್ಗೆ ಅನಂತ ಅಶೀಸರ ಉಲ್ಲೇಖ ಮಾಡಿದರು. ತುರ್ತಾಗಿ ಮಂಡಳಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಈ ಕೆಳಗಿನ ಮಹತ್ವದ ವಿಷಯಗಳನ್ನು ಸಭೆಯಲ್ಲಿ ಮಂಡಿಸಿದರು.
- ನೈಸರ್ಗಿಕ ಪಾರಂಪರಿಕ ತಾಣಗಳ ಅಧಿಕೃತ ಪ್ರಕಟಣೆ, ಆದೇಶಗಳು ಆಗಬೇಕು.
- ಮಂಡಳಿಯ ಎಬಿಎಸ್ ನಿಧಿಯ ನೆರವಿನಿಂದ 5 ಜಿಲ್ಲೆಗಳಲ್ಲಿ ಮಾದರಿ ಜೀವ ವೈವಿಧ್ಯ ಸಂರಕ್ಷಣಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಇದರ ಪ್ರಕಾಶ ಪ್ರತಿ ಜಿಲ್ಲೆಗೆ ಅನುದಾನ ನೀಡಲು ಮಂಡಳಿ ಸಭೆ ನಿರ್ಣಯ ಕೈಗೊಂಡಿದೆ. ಅರಣ್ಯ ಇಲಾಖೆ ಮೂಲಕ ಈ ಯೋಜನೆ ಜಾರಿ ಆಗಬೇಕು.
- 4 ಪಾರಂಪರಿಕ ತಾಣ ನಿರ್ವಹಣೆಗೆ ಅನುದಾನ ನೀಡುವ ಕೆಲಸ ಜರೂರಾಗಿ ಆಗಲಿ.
- ಉಪಅರಣ್ಯ ಸಂರಕ್ಷಣಾಧಿಕಾರಿಗಳನ್ನು ಜೀವ ವೈವಿಧ್ಯ ಕಾಯಿದೆ ಅನುಷ್ಠಾನ ಅಧಿಕಾರಿ ಎಂದು ಆದೇಶಿಸಲು ಸರ್ಕಾರಕ್ಕೆ ಮಂಡಳಿ ನಿರ್ಣಯ ಪ್ರಸ್ತಾವನೆ ಕಳಿಸಿದ್ದು ಹಾಗೇ ಇದೆ. ಇದು ಡಿಪಿಆರ್ ಮೂಲಕ ಆದೇಶವಾಗಬೇಕು.
- ರಾಜ್ಯದ ಪಾರಂಪರಿಕ ವೃಕ್ಷಗಳನ್ನು ಮಂಡಳಿ ಗುರುತಿಸಿದೆ. 16 ಸ್ಥಳಗಳಿವೆ. ಆದರೆ ಇದಕ್ಕೆ ಬೇಕಾದ ನಿಯಮಗಳನ್ನು ಸಿದ್ಧಪಡಿಸಲಾಗಿದ್ದರೂ ಸರ್ಕಾರಿ ಆದೇಶ ಆಗಿಲ್ಲ ಪಾರಂಪರಿಕ ವೃಕ್ಷಗಳ ಘೋಷಣೆ ಬಗ್ಗೆ ಹಲವು ಸಂಸ್ಥೆಗಳು ಆಗ್ರಹ ಮಾಡುತ್ತಿವೆ.
- ಜೀವ ವೈವಿಧ್ಯ ಅಭಿಯಾನ ಹಾಗೂ ಜೀವ ವೈವಿಧ್ಯ ಪ್ರಶಸ್ತಿ ನೀಡಿಕೆ ಕಾರ್ಯ ಪ್ರತಿ ವರ್ಷ ನಡೆಸಬೇಕು ನಿಲ್ಲಿಸಬಾರದು. ರಾಜ್ಯಮಟ್ಟದಲ್ಲಿ & ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ನೀಡಬೇಕು.
- 14 ನೇ ಹಣಕಾಸು ಆಯೋಗದ ಅನುದಾನದಲ್ಲಿ 5% ಮೊತ್ತವನ್ನು ಜೀವ ವೈವಿಧ್ಯ ರಕ್ಷಣೆ ಕಾರ್ಯಕ್ಕೆ ವಿನಿಯೋಗಿಸಬೇಕು ಎಂಬ ಅಂಶ ಆದೇಶದಲ್ಲಿ ಉಲ್ಲೇಖವಾಗಿತ್ತು. 15 ನೇ ಹಣಕಾಸು ಆಯೋಗದ ಅನುದಾನ ವಿತರಣೆ ಆದೇಶದಲ್ಲಿ ಈ ಉಲ್ಲೇಖವಿಲ್ಲ. ಆರ್.ಡಿಪಿಆರ್. ಇಲಾಖೆ ಜೊತೆ ಮಾತುಕತೆ ನಡೆಸಿ 5% ಅನುದಾನ ಜೀವ ವೈವಿಧ್ಯ ಕಾರ್ಯಗಳಿಗೆ ಮೀಸಲಿಡಲು ಆದೇಶ ಮಾಡಿಸಬೇಕು.
- ಮಂಡಳಿ ಶಿಫಾರಸಿನಂತೆ ಮೀನುಗಾರಿಕಾ ಇಲಾಖೆ ಮೂಲಕ 11 ಮತ್ಸ್ಯ ಧಾಮ ಘೋಷಣೆ ಆಗಿದೆ. ಇನ್ನೂ 15 ಮತ್ಸ್ಯ ಧಾಮಗಳನ್ನು ಮಂಡಳಿ ಮೂಲಕ ಗುರುತಿಸಿದ್ದೇವೆ. ಮೀನುಗಾರಿಕಾ ಸಚಿವರು ನಿರ್ದೇಶಕರಿಗೆ ಪ್ರಸ್ತಾವನೆ ನೀಡಿದ್ದೇವೆ. ಅಧಿಕೃತ ಆದೇಶವನ್ನು ಮೀನುಗಾರಿಕಾ ಇಲಾಖೆ ಪ್ರಕಟಿಸುವಂತೆ ಒತ್ತಡ ಹಾಕಬೇಕು.
- ಅರಣ್ಯೇತರ ಉದ್ದೇಶಕ್ಕೆ ಅರಣ್ಯ ಪ್ರದೇಶ ಮಂಜೂರಿ ಮಾಡುವಾಗ ಕೇವಲ ದೊಡ್ಡ ಮರಗಳನ್ನು ಮಾತ್ರ ಲೆಕ್ಕ ಮಾಡುವ ಪದ್ಧತಿ ಇದೆ. ಆದರೆ ಅರಣ್ಯದಲ್ಲಿ ಅಪಾರವಾದ ಚಿಕ್ಕ ಗಿಡಗಳು, ಬಳ್ಳಿ, ಪೊದೆ ಮುಂತಾದ ಜೀವ ವೈವಿಧ್ಯವಿರುತ್ತದೆ. ಲಕ್ಷಾಂತರ ಸಸ್ಯಗಳ ನಾಶವಾಗುತ್ತವೆ. ಸಭೆ ಚರ್ಚಿಸಿ ಶಿಫಾರಸನ್ನು ರಾಜ್ಯ ಕೇಂದ್ರ ಅರಣ್ಯ ಸಚಿವರ ಗಮನಕ್ಕೆ ತರಬೇಕು. ಎನ್ಬಿಎ ಗಮನಕ್ಕೆ ತರಬೇಕು. ಮಂಡಳಿಯ ಗುರುತರ ಜವಾಬ್ದಾರಿ ಇದು.
- ವಿವಿಧ ಕಾಯಿದೆ ಅಡಿಯಲ್ಲಿ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ, ಗ್ರಾಮ ಪಂಚಾಯತ ಅಡಿಯಲ್ಲಿ ರಚಿತವಾದ ಜೀವ ವೈವಿಧ್ಯ ಸಮಿತಿಗಳ ಪುನರಚನೆ ಆಗಬೇಕು. ಕ್ರಿಯಾಶೀಲ ವಾಗಬೇಕು ಆರ್.ಡಿ.ಪಿಆರ್. ಇಲಾಖೆ ನೆರವು ಪಡೆಯಬೇಕು.
- ಸಾರ್ವಜನಿಕವಾಗಿ ಅರಣ್ಯ, ಪರಿಸರ ಕಾಯಿದೆಗಳ ಅರಿವಿದೆ. ಆದರೆ ಶಾಸಕರು ಸಂಸದರು, ವಕೀಲರು, ನ್ಯಾಯಧೀಶರಿಗೆ ಜೀವ ವೈವಿದ್ಯ ಕಾಯಿದೆ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ಇನ್ನಷ್ಟು ಮಾಹಿತಿ ನೀಡಬೇಕಿದೆ. ರಾಜ್ಯ ವಿಧಾನ ಸಭೆಯ ಮಾನ್ಯ ಅಧ್ಯಕ್ಷರು ಹಾಗೂ ಹೈಕೋರ್ಟ ಮುಖ್ಯ ನ್ಯಾಯ ಮೂರ್ತಿಗಳಿಗೆ ಜೀವ ವೈವಿಧ್ಯ ಕಾಯಿದೆ ಬಗ್ಗೆ ವಿಶೇಷ ಜಾಗೃತಿ ಕಾರ್ಯಕ್ರಮ ರೂಪಿಸಲು ಮನವಿ ಮಡುವ ನಿರ್ಣಯವನ್ನು ಮಂಡಳಿ ಕೈಗೊಂಡು ಈ ದಿಶೆಯಲ್ಲಿ ವಿಶೇಷ ಪ್ರಯತ್ನ ನಡೆಸಬೇಕು.
- ಯಾದಗಿರಿ ಜಿಲ್ಲೆಯಲ್ಲಿ ಜೈವಿಕ ತಾಣಗಳ ಪಟ್ಟಿಯನ್ನು ಅಲ್ಲಿನ ಬಿಎಂಸಿಯವರು ಮಾಡಿದ್ದಾರೆ. ಖಾನಾಪುರ ತಾ : ಕುಣಕುಂಬಿ ಮಲಪ್ರಭಾ ನದೀ ಮೂಲಕ್ಕೆ ಜೀವ ವೈವಿಧ್ಯ ಮಾನ್ಯತೆ ನೀಡಬೇಕಿದೆ.
- ಗೋಕಾಕದ ಮಾರ್ಕಾಂಡೇಯ ನದೀ ತೀರದ ಪ್ರದೇಶಕ್ಕೆ ಜೀವ ಸಸ್ಯ ವೈವಿಧ್ಯ ತಾಣ ಎಂಬ ಮಾನ್ಯತೆ ಸಿಗಬೇಕು.
- ಜೀವ ವೈವಿಧ್ಯ ಪಾರಂಪರಿಕ ತಾಣ ಘೋಷಣೆ ಕುರಿತು ನಿಯಮಗಳ ರಚನೆ ಮಾಡಿದ್ದೇವೆ. ಇದು ಆದೇಶವಾಗಬೇಕು ದೇಶದಲ್ಲಿ ಇದು ಮಾದರಿ ಆಗಲಿದೆ.
- ವಿಶ್ವ ವಿದ್ಯಾಲಯ, ಸಂಸ್ಥೆಗಳಿಗೆ ಜೀವ ವೈವಿಧ್ಯ ಕುರಿತು ವಿಚಾರ ಸಂಕಿರಣ, ಸಮ್ಮೇಳನ ನಡೆಸಲು ಅನುದಾನ ನೀಡಲು ಅವಕಾಶವಿದೆ. ಇದನ್ನು ಮುಂದುವರೆಸಬೇಕು ಜ್ವಲಂತ ಜೀವ ವೈವಿಧ್ಯ ಪರಿಸ್ಥಿತಿ ಬಗ್ಗೆ ಅಧ್ಯಯನಗಳನ್ನು ನಡೆಸಲು ಅನುದಾನ ನೀಡಬೇಕು.
- ಡೀಮ್ಡ ಅರಣ್ಯ 2.3 ಲಕ್ಷ ಹೆಕ್ಟೇರ್ ಇದೆ ಎಂದು ಸರಕಾರ ಆದೇಶ ಮಾಡಿದೆ. ಇದರ ರಕ್ಷಣೆ ಅಭಿವೃದ್ಧಿ ಯೋಜನೆ ರೂಪಿಸಿ ಅನುದಾನ ನೀಡಿ ಎಂದು ಜೀವ ವೈವಿಧ್ಯ ಮಂಡಳಿ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಿಗೆ ಶಿಫಾರಸು ಮಾಡಬೇಕು.
ಜೀವವೈವಿಧ್ಯ ಮಂಡಳಿ ಸಭೆಯಲ್ಲಿ ಪಿ.ಸಿ.ಸಿ.ಎಫ್. ಆರ್.ಕೆ.ಸಿಂಗ್, ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ| ವಿಜಯ ಮೋಹನ ರಾಜ್, ಆಯುಷ ಕಮೀಶನರ್ ಡಾ| ರಾಮಚಂದ್ರ ಪಂಚಾಯತ ರಾಜ್ ಇಲಾಖೆ ನಿರ್ದೆಶಕ ಯಾಲಕ್ಕಿ ಗೌಡ, ಪೊನ್ನಂ ಪೇಟೆ ಅರಣ್ಯ ಕಾಲೇಜಿನ ಡೀನ್ ಡಾ| ಕುಶಾಲಪ್ಪ, ಕಡಲಪರಿಸರ ವಿಜ್ಞಾನಿ ಡಾ| ಪ್ರಕಾಶ ಮೇಸ್ತ, ಮಂಡಳಿ ಸದಸ್ಯ ಕೆ. ವೆಂಕಟೇಶ, ಮಂಡಳಿ ಸದಸ್ಯ ಕಾರ್ಯದರ್ಶಿ ಅನಿತಾ ಅರೇಕಲ್ ಹಾಗೂ ಕೃಷಿ ಮತ್ತು ಆರೋಗ್ಯ ಇಲಾಖೆ, ಅಧಿಕಾರಿಗಳು ಮುಂತಾದವರಿದ್ದರು.
ಜೀವವೈವಿಧ್ಯ ಮಂಡಳಿ ಮುಂದೆ ಅನಂತ ಹೆಗಡೆ ಅಶೀಸರ ಅವರು ಹಲವು ಗಂಭೀರ ಮಹತ್ವದ ತುರ್ತು ವಿಷಯಗಳನ್ನು ಮಂಡಿಸಿದ್ದಾರೆ. ಇವೆಲ್ಲವುಗಳನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲು ವಿಶೇಷ ಯತ್ನ ನಡೆಸುತ್ತೇವೆ ಎಂದು ಮಂಡಳಿಯ ಅಧ್ಯಕ್ಷ ರವಿ ಕಾಳಪ್ಪಾ ಭರವಸೆ ನೀಡಿದರು. ಮಂಡಳಿ ಸದಸ್ಯ ಕಾರ್ಯದರ್ಶಿ ಅನಿತಾ ಅರೇಕಲ್ ಸ್ವಾಗತಿಸಿದರು. ಮಂಡಳಿಯ ಅಧಿಕಾರಿ ಶ್ರೀಮತಿ ಪವಿತ್ರಾ ವಂದಿಸಿದರು .