ಸಿದ್ದಾಪುರ: ಆಳ್ವಾ ಫೌಂಡೇಶನ್, ನಂದನ ನಿಲೇಕಣಿ ಕುಟುಂಬದವರ ಸಹಯೋಗದಲ್ಲಿ ತಾಲೂಕಿನ ವಿವಿಧ ಶಾಲೆಗಳಿಗೆ ನೀಡಲಾದ ಆಟಿಕೆ ಸಾಮಗ್ರಿಗಳನ್ನು ಆಳ್ವಾ ಫೌಂಡೇಶನ್ ಟ್ರಸ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ ಆಳ್ವಾ ಮಂಗಳವಾರ ಉದ್ಘಾಟಿಸಿದರು.
ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತದ ಕಿಲವಳ್ಳಿ ಸರ್ಕಾರಿ ಶಾಲೆ, ಪಟ್ಟಣದ ಕೊಂಡ್ಲಿ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಗಳಿಗೆ ನೀಡಲಾದ ಆಟಿಕೆ ಸಾಮಗ್ರಿಗಳನ್ನು ನಿವೇದಿತ್ ಆಳ್ವಾ ಉದ್ಘಾಟಿಸಿ ಮಾತನಾಡಿ, ಆಳ್ವಾ ಫೌಂಡೇಶನ್ ಹಾಗೂ ನಂದನ ನಿಲೇಕಣಿ ಕುಟುಂಬದ ವತಿಯಿಂದ ಕಳೆದ ವರ್ಷ ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ 8 ಶಾಲೆಗಳಿಗೆ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಒಟ್ಟು 25 ಶಾಲೆಗಳಿಗೆ ಆಟಿಕೆ ಸಾಮಗ್ರಿ ಹಾಗೂ ಅಗತ್ಯ ಪರಿಕರಗಳನ್ನು ನೀಡಲಾಗುತ್ತಿದೆ. ಮುಂದೆಯೂ ಸಹ ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯ ಕಲ್ಪಿಸಲು ಕೈಲಾದ ಸಹಾಯ ಮಾಡಲಾಗುವುದು ಎಂದರು.
ಈ ವೇಳೆ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿ.ಎನ್.ನಾಯ್ಕ ಬೇಡ್ಕಣಿ, ತಾಲೂಕಾ ಪಂಚಾಯತ ಮಾಜಿ ಸದಸ್ಯ ನಾಸಿರ್ ಖಾನ್, ವಕೀಲರಾದ ಸತೀಶ ಪಿ.ನಾಯ್ಕ, ಪ್ರಮುಖರಾದ ಸಾವೇರ್ ಡಿಸಿಲ್ವಾ, ಮುನಾವರ್ ಗುರಕಾರ್, ಗಾಂಧೀಜಿ ಆರ್. ನಾಯ್ಕ, ಮಾರುತಿ ಕಿಂದ್ರಿ ಮತ್ತಿತರರು ಉಪಸ್ಥಿತರಿದ್ದರು.