ಯಲ್ಲಾಪುರ: ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಐಬಿ ರಸ್ತೆಯಲ್ಲಿ ಹಳ್ಳದಂತೆ ನೀರು ಹರಿದಿದ್ದು, ಬೈಕ್ ಸಂಚಾರಕ್ಕೆ, ಪಾದಾಚಾರಿಗಳ ಓಡಾಟಕ್ಕೆ ತೊಂದರೆಯಾದ ಘಟನೆ ನಡೆದಿದೆ.
ಪಟ್ಟಣದ ಮುಂಡಗೋಡ ರಸ್ತೆಯಲ್ಲಿಯ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಎದುರಿನಿಂದ ಹರಿದು ಬರುವ ನೀರು ಚರಂಡಿಯಲ್ಲಿ ಸಾಗದೇ, ಅಂಬೇಡ್ಕರ್ ವೃತ್ತ ಬಳಸಿ ಮುಖ್ಯ ರಸ್ತೆಯ ಮೂಲಕ ಬಸವೇಶ್ವರ ವೃತ್ತವನ್ನು ಬಳಸಿ ನಂತರ ಐಬಿ ರಸ್ತೆ ಮೂಲಕ ತಗ್ಗು ಪ್ರದೇಶಕ್ಕೆ ಹರಿಯುತ್ತದೆ. ಇತ್ತೀಚೆಗೆ ಸುರಿಯುತ್ತಿರುವ ಭಾರೀ ಮಳೆಯಿಂದ ಕಸಕಡ್ಡಿಗಳು ಚರಂಡಿಗಳಲ್ಲಿ ಕಟ್ಟಿ ಬಿದ್ದಿರುವುದರಿಂದ ಚರಂಡಿಗಳು ನೀರನ್ನು ತೆಗೆದುಕೊಳ್ಳುತ್ತಿಲ್ಲ. ನೀರು ರಸ್ತೆಯಲ್ಲಿಯೇ ಸಂಗ್ರಹವಾಗುವುದರಿಂದ ಈ ಸಮಸ್ಯೆ ಉದ್ಭವಿಸಿದೆ.
ಸೋಮವಾರ ಬಸವೇಶ್ವರ ವೃತ್ತದ ಬಸವೇಶ್ವರ ದೇವಸ್ಥಾನದ ಹಿಂಬದಿ ಹಾಗೂ ಮುಂಭಾಗದಲ್ಲಿಯೂ ಕೂಡ ಪ್ರವಾಹದಂತೆ ನೀರು ಹರಿದಿದ್ದು ಕಂಡುಬಂದಿದೆ. ಅಲ್ಲದೆ ಐಬಿ ರಸ್ತೆಯಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತಿದ್ದರಿಂದ ಬೈಕ್ ಸವಾರರು ಪಾದಚಾರಿಗಳಿಗೆ ಸಂಚಾರಕ್ಕೆ ಕೆಲವು ತಾಸುಗಳ ಕಾಲ ವ್ಯತ್ಯಯ ಉಂಟಾಗಿತ್ತು. ಪಟ್ಟಣ ವ್ಯಾಪ್ತಿಯಲ್ಲಿ ಎಲ್ಲ ರಸ್ತೆಗಳ ಪಕ್ಕದಲ್ಲಿಯೇ ಪಕ್ಕಾ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ, ಚರಂಡಿ ನಿರ್ಮಾಣದಲ್ಲಿ ಅವೈಜ್ಞಾನಿಕವಾಗಿದೆ. ಅಷ್ಟೆ ಅಲ್ಲದೇ ಸಾರ್ವಜನಿಕರು ತಮ್ಮ ಮನೆ ಎದುರಿನ ಚರಂಡಿಯ ಮೇಲೆ ಮುಚ್ಚಿಗೆ ಹಾಕಿರುವುದರಿಂದ ರಸ್ತೆ ಮೇಲಿನ ನೀರು ಚರಂಡಿಗೆ ಸಾಗದೆ ರಸ್ತೆಯಲ್ಲಿಯೇ ಸಂಗ್ರಹವಾಗಿ ಈ ಎಲ್ಲ ಸಮಸ್ಯೆ ಕಾರಣವಾಗುತ್ತಿದೆ.
ಈ ವರ್ಷ ದೊಡ್ಡ ಮಳೆ ಸುರಿದಾಗಲೂ ಕೂಡ ಯಾವುದೇ ಸಮಸ್ಯೆಯಾಗಿರಲಿಲ್ಲ. ಸೋಮವಾರ ಮಧ್ಯಾಹ್ನದ ನಂತರ ಈ ಸಮಸ್ಯೆ ಉದ್ಭವಿಸಿದೆ. ಈ ಕುರಿತು ಪಟ್ಟಣ ಪಂಚಾಯಿತಿಯವರು ಕ್ರಮ ಕೈಗೊಂಡು ರಸ್ತೆ ಮೇಲೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.