ಗೋಕರ್ಣ: ಸೃಷ್ಟಿಯ ಬದಲು ದೃಷ್ಟಿಯನ್ನು ಬದಲಾಯಿಸಿಕೊಳ್ಳುವ ಪ್ರಯತ್ನ ಮಾಡೊಣ. ಶುಭದೃಷ್ಟಿ ನಮ್ಮೆಲ್ಲರ ಬದುಕನ್ನು ಸುಖಮಯಗೊಳಿಸುತ್ತದೆ ಎಂದು ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಅಶೋಕೆಯ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಮೂಗಿನ ನೇರಕ್ಕೆ ಸೃಷ್ಟಿಯನ್ನು ಬದಲಾಯಿಸುವುದು ಸಾಧ್ಯವಿಲ್ಲ. ಅದರ ಬದಲಾಗಿ ಸೃಷ್ಟಿಯನ್ನು, ಅದರ ಒಳಿತು ಕೆಡುಕುಗಳನ್ನು ನೋಡುವ ದೃಷ್ಟಿ ಬದಲಾಯಿಸಿಕೊಳ್ಳೋಣ ಎಂದು ಸಲಹೆ ಮಾಡಿದರು. ಎಂಥ ಕಷ್ಟದಲ್ಲೂ ಇಷ್ಟವನ್ನು ಕಾಣುವ ದೃಷ್ಟಿ ನಮಗೆ ಬರಲಿ; ಪ್ರತಿಯೊಂದರಲ್ಲೂ ಉತ್ತಮ ಅಂಶಗಳಿರುತ್ತವೆ. ಅದನ್ನು ಗುರುತಿಸುವ ದೃಷ್ಟಿ ನಮ್ಮದಾಗಬೇಕು ಎಂದು ಅಭಿಪ್ರಾಯಪಟ್ಟರು.
ಭಟ್ಕಳ ಶಾಸಕ ಸುನೀಲ್ ನಾಯ್ಕ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎಸ್.ಸಚ್ಚಿದಾನಂದಮೂರ್ತಿ ಸೋಮವಾರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಚಾತುರ್ಮಾಸ್ಯ ಅಂಗವಾಗಿ ಸೋಮವಾರ ಐದು ದಿನಗಳ ಸಹಸ್ರಚಂಡಿಯಾಗ ಆರಂಭವಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಡಿತ್ ವೆಂಕಟೇಶ ಕುಮಾರ್ ಅವರು ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.