ಶಿರಸಿ : ತಾಲೂಕಿನ ಹಳ್ಳಿಕಾನಿನಲ್ಲಿ ನೂರಾರು ವರ್ಷಗಳ ಹಿಂದಿನ ಮರವೊಂದು ಬುಡಸಮೇತ ಕಿತ್ತು ಮನೆಯೊಂದರ ಮೇಲೆ ಬಿದ್ದು, ಮನೆ ಸಂಪೂರ್ಣ ಜಖಂಗೊಂಡು ವಾಸವಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ನಡೆದಿದೆ.
ಎಲ್ಲರೂ ಹಬ್ಬದ ವಾತವರಣದಲ್ಲಿ ಮಲಗಿದ್ದ ಸಂದರ್ಭದಲ್ಲಿ ಹತ್ತಾರು ವರ್ಷಗಳಿಂದ ಮನೆಯ ಹಿಂಬದಿಯಲ್ಲಿ ಒಣಗಿ ನಿಂತಿದ್ದ ಮರ ಬುಡಸಮೇತ ಮನೆಯ ಮೇಲೆ ಬಿದ್ದಿದೆ. ಭಯಾನಕ ಶಬ್ದ ಕೇಳಿ ಗ್ರಾಮಸ್ಥರು ಬಂದು ನೋಡಿದ್ದು, ಘಟನೆಯಲ್ಲಿ 10 ಲಕ್ಷ ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಹಳ್ಳಿಕಾನ ವಾಸು ನಾಯ್ಕ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಇಲ್ಲಿ ಎರಡು ಕುಟುಂಬದಿಂದ ಆರು ಜನರು ವಾಸವಿದ್ದರು. ವಾಸು ಅವರ ಅಣ್ಣನ ಹೆಂಡತಿ ಅದೇ ಮನೆಯ ಇನ್ನೊಂದು ಮಾಳಿಗೆಯಲ್ಲಿ ವಾಸವಿದ್ದು, ಅವರ ಮಗನ ತಲೆಗೆ ಪೆಟ್ಟು ಬಿದ್ದು, ಹೊಲಿಗೆ ಹಾಕಲಾಗಿದೆ. ಇನ್ನು ವಾಸು ಅವರ ಪತ್ನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮಸ್ಥರು ಗಾಯಾಳುಗಳನ್ನು ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಕುಳವೆ ಗ್ರಾಪಂ ಅಧ್ಯಕ್ಷ ವಿನಯ ಭಟ್, ಸದಸ್ಯ ಸಂದೇಶ ಭಟ್ ಬೆಳಖಂಡ, ಗ್ರಾಮ ಲೆಕ್ಕಾಧಿಕಾರಿ ಸೌಮ್ಯ ಶೇಟ್, ಗ್ರಾಮ ಸಹಾಯಕ ನಾರಾಯಣ ನಾಯ್ಕ, ಗ್ರಾಪಂ ಸಿಬ್ಬಂದಿ ರವಿ ಪಟಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುಟುಂಬದವರು ಇರುವ ಸ್ವಲ್ಪ ಗದ್ದೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಘಟನೆಯಿಂದ ಸಂಪೂರ್ಣ ಮನೆ ಜಖಂಗೊಂಡಿದ್ದು,ಆದ ನಷ್ಟ ಸರಿಪಡಿಸಲು ಪ್ರಕೃತಿ ವಿಕೋಪದ ಅಡಿಯಲ್ಲಿ ಅನುದಾನ ಬಂದರೂ ಅದು ಸಾಕಾಗುವುದಿಲ್ಲ. ಕಾರಣ ದಾನಿಗಳು ಸಹಕಾರ ಮಾಡಬೇಕಾಗಿ ಗ್ರಾಪಂ ಸದಸ್ಯ ಸಂದೇಶ ಭಟ್ ಬೆಳಖಂಡ ವಿನಂತಿಸಿದ್ದಾರೆ.