ಶಿರಸಿ: ಭಾರತದಲ್ಲಿ ಅದ್ದೂರಿಯಾಗಿ ಆಚರಿಸಲ್ಪಡುವ ಗಣೇಶನ ಹಬ್ಬಕ್ಕೆ ನೂರಾರು ರೀತಿಯ ಗಣಪಗಳು ಗಮನ ಸೆಳೆಯುತ್ತವೆ. ಹೌದು ಇದೀಗ ತಾಲೂಕಿನ ಬಚಗಾಂ ಗ್ರಾಮದ ಪ್ರಜ್ವಲ್ ಎಸ್ ಮಡಿವಾಳ, ಡಿಗ್ರಿ ಮೊದಲ ವರ್ಷದ ವಿದ್ಯಾರ್ಥಿ ಕೈಯಲ್ಲಿ ಮೂಡಿಬಂದ ರಾಮ ಮಂದಿರ, ಬಸವ ಆಸೀನ ಹಾಗೂ ಅಪ್ಪು ಜೊತೆಗಿನ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ.
ಬಾಲ್ಯದಿಂದಲೂ ಗಣೇಶನ ಮೂರ್ತಿ ಮಾಡಲು ಪ್ರಯತ್ನಿಸುತ್ತಾ ಬಂದ ಈ ವಿದ್ಯಾರ್ಥಿ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಮಾಡುತ್ತ ಬಂದಿದ್ದು ಜಿಲ್ಲೆಯಲ್ಲಿ ಗಮನ ಸೆಳೆಯುತ್ತಿದ್ದಾನೆ. ಸದ್ಯ ಸಿರಸಿಯಲ್ಲಿ ಬಿ.ಎ ಪ್ರಥಮ ವರ್ಷ ಓದುತ್ತಿರುವ ಪ್ರಜ್ವಲ್ ಈ ವರ್ಷ ತಯಾರಿಸಿರುವ ನಂದಿಯ ಮೇಲೆ ಕುಳಿತಿರುವ ಗಣೇಶ, ಡಮರು ಮೇಲೆ ಕುಳಿತ ಗಣೇಶ, ಅಯೋಧ್ಯೆಯ ರಾಮ, ಲಕ್ಷ್ಮಣ ಹನುಮಂತ ಸಮೇತವಾಗಿರುವ ಗಣೇಶ ಹಾಗೂ ಪುನೀತ್ ಜೊತೆ ಇರುವ ಗಣೇಶ ಮೂರ್ತಿಗಳು ಆಕರ್ಷಣೀಯವಾಗಿವೆ.
ದರ್ಶನ್ ಅಭಿಮಾನಿಯಾಗಿರುವ ಪ್ರಜ್ವಲ್ ಪ್ರಾರಂಭದಲ್ಲಿ ಕುರುಕ್ಷೇತ್ರದ ಸಿನಿಮಾದಲ್ಲಿ ದರ್ಶನ್ ಸಿಂಹದ ಮೇಲೆ ಕೂತಿರುವ ಕಾನ್ಸೆಪ್ಟ್ನಲ್ಲಿ ಸಿಂಹದ ಮೇಲೆ ಆಸಿನ ಗಣಪತಿಯನ್ನು ತಯಾರಿಸಿದ್ದ. ಈ ಕಲೆಯನ್ನು ಗುರುತಿಸಿ ಕುಂಟಗಳಲೆ ಗ್ರಾಮಸ್ಥರು ಸಾರ್ವಜನಿಕ ಗಣೇಶ ಮೂರ್ತಿ ಮಾಡುವಂತೆ ಕೇಳಿಕೊಂಡಿದ್ದರು. ನಂತರ ಪ್ರಜ್ವಲ್ ಮೊದಲ ಪ್ರಯತ್ನದಲ್ಲಿಯೇ ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಕರೋನಾ ಸಂಹಾರಕ ಗಣೇಶನನ್ನು ತಯಾರಿಸಿದ್ದ. ಈ ವರ್ಷ ಸಿರಸಿ ತಾಲೂಕಿನ ಕೊಪ್ಪ, ಹಿತ್ಲಗದ್ದೆ ಹಾಗೂ ಸೊರಬ ತಾಲೂಕಿನ ಅಂಬ್ಲಿಕೊಪ್ಪ ಗ್ರಾಮಗಳಲ್ಲಿ ಈ ಗಣೇಶ ಮೂರ್ತಿಗಳನ್ನು ಸಾರ್ವಜನಿಕವಾಗಿ ಪೂಜೆಯನ್ನು ಮಾಡಲಾಗುತ್ತದೆ. ವಿಶೇಷವೆಂದರ ಪ್ರಜ್ವಲ್ ಮಣ್ಣಿನಿಂದಲೇ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಬರುತ್ತಿದ್ದು, ಪರಿಸರ ಪ್ರೇಮಿಯಾಗಿಯೂ ಗಮನ ಸೆಳೆಯುತ್ತಿದ್ದಾನೆ. ಇಂದು ಪರಿಸರ ಸ್ನೇಹಿ ಹಾಗೂ ಮಣ್ಣಿನಿಂದ ತಯಾರಾದ ಗಣೇಶನಿಗೆ ಹೆಚ್ಚು ಬೇಡಿಕೆ. ಉತ್ತರ ಕನ್ನಡ ಜಿಲ್ಲೆಯ ಸಿರಸಿಯಲ್ಲಿ ಸಾವಿರಕ್ಕೂ ಹೆಚ್ಚು ಗಣೇಶ ತಯಾರಾಗುತ್ತವೆ. ಕಳೆದ 4-5 ವರ್ಷದಿಂದ ಸಿರಸಿಯ ಶಿಲ್ಪ ಸೃಷ್ಠಿಯ ಪ್ರಶಾಂತ ಹಾಗೂ ಸಂತೋಷ್ ಗುಡಿಗಾರ ಬಳಿ ಮೂರ್ತಿ ತಯಾರಿಕೆಯ ತರಬೇತಿ ಪಡೆಯುತ್ತಿದ್ದಾನೆ . ಈಗಾಗಲೇ ಪ್ರಾಥಮಿಕ, ಹೈಸ್ಕೂಲ್ ಹಾಗೂ ಪಿಯು ಕಾಲೇಜ್ನಲ್ಲಿ ಪ್ಲೆ ಮಾಡಲಿಂಗ್ನಲ್ಲಿ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾನೆ.