ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಕೆ.ಎಚ್.ಬಿ ಕಾಲೋನಿಯಲ್ಲಿಯ ದುರ್ನಾತ ಬೀರುತ್ತಿರುವ ಒಡೆದು ಹೋದ ಸೆಪ್ಟಿಕ್ ಚೆಂಬರ್ ಸ್ಥಳೀಯರಲ್ಲಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿದೆ.
ಡಾ.ದೀಪಾ ಎಂಬುವವರ ಮನೆಯ ಹತ್ತಿರ ಕಳೆದ ಮೂರು ತಿಂಗಳ ಹಿಂದೆ ನಗರಸಭೆಯಿಂದ ಚರಂಡಿ ನಿರ್ಮಿಸಲಾಗಿದ್ದು, ಗಟಾರ ನಿರ್ಮಿಸುವ ಸಂದರ್ಭದಲ್ಲಿ ಈ ಹಿಂದಿನಿಂದಲೂ ಇರುವ ಯುಜಿಡಿ ಪೈಪ್ಲೈನ್ ಸೆಪ್ಟಿಕ್ ಚೆಂಬರ್ ಒಡೆದು ಹೋಗಿ, ತ್ಯಾಜ್ಯ ನೀರು ಹೊರಬರುವಂತಾಗಿದೆ. ಪರಿಣಾಮವಾಗಿ ಸೆಪ್ಟಿಕ್ ಚೆಂಬರ್ ಸುತ್ತಲು ತ್ಯಾಜ್ಯ ಹಾಗೂ ತ್ಯಾಜ್ಯ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಚರಂಡಿ ನಿರ್ಮಿಸಿದ ಗುತ್ತಿಗೆದಾರನಿಗೆ ದುರಸ್ತಿಗೆ ಸ್ಥಳೀಯರೂ ಆಗ್ರಹಿಸಿದ್ದು ಕಾಮಗಾರಿ ಮುಗಿದರೂ ದುರಸ್ತಿ ಮಾಡಿಕೊಟ್ಟಿಲ್ಲ.
ಈ ಬಗ್ಗೆ ನಗರಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ. ಬಹುಷ: ಇಲ್ಲಿ ಇಂಥಹ ಅಸ್ವಚ್ಚತೆಯಿಂದಾಗಿ ಸ್ಥಳೀಯ ಜನತೆ ರೋಗ ರುಜಿನಗಳಿಗೆ ತುತ್ತಾಗಿ ಒಂದೆರಡು ಸಾವು ಸಂಭವಿಸಿದ ಮೇಲೆಯೆ ದುರಸ್ತಿ ಮಾಡುತ್ತಾರೋ ಎಂಬೆಲ್ಲ ಪ್ರಶ್ನೆಗಳು ಸಹಜವಾಗಿ ಜನರ ಬಾಯಲ್ಲಿದೆ. ಸ್ವಚ್ಚತೆಯ ಬಗ್ಗೆ ಪಾಠ ಮಾಡುವ ನಗರ ಸಭೆಗೆ ಅಸ್ವಚ್ಚತೆಯಿಂದ ತಾಂಡವವಾಡುತ್ತಿರುವ ಇಲ್ಲಿಯ ಸೆಪ್ಟಿಕ್ ಚೆಂಬರ್ ದುರಸ್ತಿಗೆ ಕ್ರಮ ಕೈಗೊಳ್ಳಲು ಆಗದೇ ಇರುವುದು ನಗರ ಸಭೆಗೆ ಸ್ವಚ್ಚತೆಯ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುವಂತಾಗಿದೆ.
ಮೊದಲೇ ಡೆಂಗ್ಯೂ, ಹಳದಿ ಕಾಮಾಲೆ, ಮಲೇರಿಯಾಗಳಂತ ರೋಗ ರುಜಿನಗಳಿಂದ ಭಯಭೀತರಾಗಿರುವ ಇಲ್ಲಿಯ ಜನತೆಯ ಕಳೆದ ಮೂರು ತಿಂಗಳಿನಿಂದಿರುವ ಸೆಪ್ಟಿಕ್ ಚೆಂಬರ್ ದುರಸ್ತಿ ಮನವಿಗೆ ಕೊನೆಪಕ್ಷ ಮೂರು ದಿನಗಳೊಳಗೆ ಅಗತ್ಯ ಕ್ರಮವನ್ನು ನಗರಸಭೆ ಕೈಗೊಳ್ಳುವಂತಾಗಲೆನ್ನುವುದೇ ಸ್ಥಳೀಯರ ಒತ್ತಾಸೆಯಾಗಿದೆ.