ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿಯಲ್ಲಿ ಬಿಎಸ್‌ಎನ್‌ಎಲ್ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸುವಂತೆ, ಇಲ್ಲವೇ ಬೇರೆ ಯಾವುದೇ ಖಾಸಗಿ ನೆಟ್ವರ್ಕ್ ಸಂಪರ್ಕವನ್ನು ಒದಗಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಗೆ, ಕೋವೆ, ಶಿರ್ವೆ, ನಿವಳಿ, ಬರ್ಗಲ್, ಬೇಳೂರು, ನೈತಿಸಾವರ್ ಹೀಗೆ ಅನೇಕ ಗ್ರಾಮಗಳು ಒಳಗೊಂಡಿದೆ. ಆದರೆ ಈ ಭಾಗದ ಜನರಿಗೆ ಪ್ರಮುಖವಾದ ಸಮಸ್ಯೆ ಅಂದರೆ ವಿದ್ಯುತ್ ಹೋದರೆ ಬಿಎಸ್‌ಎನ್‌ಎಲ್ ನೆಟ್ವರ್ಕ್ ಹೋಗುತ್ತದೆ ಮತ್ತು ಬೇರೆ ಯಾವುದೇ ಖಾಸಗಿ ನೆಟ್ವರ್ಕ್ ಟವರ್ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಲ್ಲ. ಇದರಿಂದಾಗಿ ತುರ್ತು ಸಂದರ್ಭದಲ್ಲಿ, ಶಾಲಾ- ಕಾಲೇಜು ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣಕ್ಕೆ ಹಾಗೂ ಆನ್‌ಲೈನ್ ಸಂಬಂಧಿ ಸಾರ್ವಜನಿಕ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ. ದೇಶದಲ್ಲಿ ಡಿಜಿಟಲ್ ಇಂಡಿಯಾ ಯೋಜನೆ ಕಾರ್ಯರೂಪಕ್ಕೆ ಬಂದಿದ್ದರೂ ಹಳ್ಳಿಗಳಲ್ಲಿ ಮಾತ್ರ ಇನ್ನೂ ತನಕ ನೆಟ್ವರ್ಕ್ ಸಂಪರ್ಕ ಸಮಸ್ಯೆ ಹಾಗೆಯೇ ಉಳಿದುಬಿಟ್ಟಿದೆ.
ಒಂದು ವಾರದವರೆಗೆ ದೇವಳಮಕ್ಕಿ ಗ್ರಾಮ ಪಂಚಾಯಿತಿಯಲ್ಲಿ ಬಿಎಸ್‌ಎನ್‌ಎಲ್ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಬೇರೆ ಯಾವುದೇ ಖಾಸಗಿ ನೆಟ್ವರ್ಕ್ ಟವರ್ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಮಸ್ಯೆ ವಾರದಲ್ಲಿ ಬಗೆಹರಿಯದಿದ್ದರೆ ಸೆಪ್ಟೆಂಬರ್ 2ರಂದು ದೇವಳಮಕ್ಕಿ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ದೇವಳಮಕ್ಕಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್ ಗೌಡ ಮತ್ತಿತರರು ಇದ್ದರು.