ಅಂಕೋಲಾ: ನಾಡಿನ ಪ್ರತಿಷ್ಠಿತ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಾದ ಶ್ರೀರಾಮ ಸ್ಟಡಿ ಸರ್ಕಲ್‌ನ ‘ಬಾಪು ಸದ್ಭಾವನಾ ಪುರಸ್ಕಾರ-2022’ಕ್ಕೆ ಹೊನ್ನಾವರ ತಾಲೂಕಿನ ಶ್ರೀಕ್ಷೇತ್ರ ನಿಲಗೋಡದ ಶ್ರೀಯಕ್ಷಿ ಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಮಹಾದೇವಸ್ವಾಮಿ ಹಾಗೂ ಕುಮಟಾ ತಾಲೂಕಿನ ಹಿರೇಗುತ್ತಿಯ ಆಶ್ರಮ ಫೌಂಡೇಶನ್‌ನ ಅಧ್ಯಕ್ಷ ರಾಜೀವ ಗಾಂವಕರರವರು ಆಯ್ಕೆಯಾಗಿದ್ದಾರೆ.
ಸ್ಥಳೀಯ ನವ ಕರ್ನಾಟಕ ಸಂಘದ ಅಧ್ಯಕ್ಷ ಮಂಜುನಾಥ ಗಾಂವಕರ ಬರ್ಗಿಯವರ ಅಧ್ಯಕ್ಷತೆಯಲ್ಲಿ, ಶ್ರೀರಾಮ ಸ್ಟಡಿ ಸರ್ಕಲ್‌ನ ಅಧ್ಯಕ್ಷ ಎ.ಎಲ್.ನಾಯಕ ಹಾಗೂ ಕನ್ನಡ ಚಂದ್ರಮ ಉತ್ತರ ಕನ್ನಡದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿಯವರನ್ನು ಒಳಗೊಂಡ ತ್ರಿಸದಸ್ಯರ ಆಯ್ಕೆ ಸಮಿತಿಯು ಈ ಇಬ್ಬರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.
ಶ್ರೀರಾಮ ಸ್ಟಡಿ ಸರ್ಕಲ್‌ನ ದಶಮಾನೋತ್ಸವದ ಸ್ಮೃತಿಯಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಶತಮಾನೋತ್ತರ ಸ್ವರ್ಣ ಜಯಂತಿಯ ವರ್ಷದಿಂದ ಸಾಧಕರನ್ನು ಗುರುತಿಸಿ, ಬಾಪು ಸದ್ಭಾವನಾ ಪುರಸ್ಕಾರವನ್ನು ಅಂಕೋಲಾದ ನವಕರ್ನಾಟಕ ಸಂಘದ ಸಹಯೋಗದಿಂದ ನೀಡುತ್ತ ಬಂದಿದ್ದು, 2019ರಲ್ಲಿ ಕುಮಟಾದ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೊಗ್ಗ ಮೂಲದ ಅಬ್ದುಲ್ ಗಫಾರ ಮುಲ್ಲಾ ಹಾಗೂ ರಾಷ್ಟ್ರೀಯವಾದ ಹಿರಿಯ ಚುಟುಕು ಕವಿ ಶಿವಬಾಬಾ ನಾಯ್ಕ, 2020ರಲ್ಲಿ ಸ್ಥಳೀಯ ಪಿ.ಎಂ.ಪ್ರೌಢಶಾಲೆಯ ವಿಶ್ರಾಂತ ಮುಖ್ಯಾಧ್ಯಾಪಕ ರವೀಂದ್ರ ಕೇಣಿ, ಸೌಹಾರ್ದತೆಯ ಸಮಾಜ ಸೇವಕ ನವಾಜ ಶೇಖ್ ಹಾಗೂ ಕೊರೋನಾ ವಾರಿಯರ್ ಖ್ಯಾತ ವೈದ್ಯೆ ಡಾ.ಅರ್ಚನಾ ನಾಯಕ, 2021ರಲ್ಲಿ ಕಾರವಾರದ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಗಜಾನನ ನಾಯಕ ಹಾಗೂ ಉಡುಪಿಯ ಬೈಂದೂರು ಶಿರೂರಿನ ಜ್ಞಾನದಾ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಡಾ.ಜಿ.ಎಸ್.ಭಟ್ಟರವರು ಭಾಜನರಾಗಿದ್ದರು.
ಹಿಂದುಳಿದ ಬೆಸ್ತ ಜನಾಂಗದಲ್ಲಿ ಜನಿಸಿದರೂ ಆಸ್ತಿಕತೆಯನ್ನು ಮೈಮೇಲೆಕೊಂಡು ದುರ್ಗಮವಾದ ನಿಲಗೋಡನ್ನು ಕಾರಣಿಕ ಕ್ಷೇತ್ರವನ್ನಾಗಿಸಿ, ಸೇವಾ ಕೈಂಕರ್ಯದಲ್ಲಿ ಸಕ್ರಿಯವಾಗಿರುವ ಮಹಾದೇವಸ್ವಾಮಿಯವರೊಂದಿಗೆ ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ನಾಡಿಗೆ ಆಸ್ತಿಯಾಗಿ ಉತ್ತರ ಕನ್ನಡ ಜಿಲ್ಲೆಗೆ ಹಿರಿಮೆಯಾಗಿರುವ ರಾಜೀವ ಗಾಂವಕರರವನ್ನು ಈ ವರ್ಷದ ‘ಬಾಪು ಸದ್ಭಾವನಾ ಪುರಸ್ಕಾರ’ಕ್ಕೆ ಆಯ್ಕೆಗೊಳಿಸಿರುವುದು ಅಭಿಮಾನದ ವಿಷಯವೆಂದು ಶ್ರೀರಾಮ ಸ್ಟಡಿ ಸರ್ಕಲಿನ ನಿರ್ದೇಶಕ ಸೂರಜ್ ಅರವಿಂದ ಅಭಿಪ್ರಾಯಿಸಿದ್ದಾರೆ. ಬರುವ ಅಕ್ಟೋಬರ್ 02ರ ಬಾಪು- ಶಾಸ್ತ್ರೀ ಜಯಂತಿಯ ಸುದಿನದಂದು ಮಧ್ಯಾಹ್ನ 3 ಗಂಟೆಗೆ ಶ್ರೀರಾಮ ಸ್ಟಡಿ ಸರ್ಕಲ್‌ನ ಬಂಗಾರಮಕ್ಕಿ ‘ಶ್ರೀವೀರಾಂಜನೇಯ ಸಭಾಭವನ’ದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.